ಮಂಡ್ಯ; ಶಾಲಾ ಕಾಲೇಜುಗಳ ಮಕ್ಕಳಲ್ಲಿ ಮಹಿಳಾ ದೌರ್ಜನ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಶ್ಲಾಘನೀಯ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿಗಳಾದ ಮಂಗಲ ಶಿವಣ್ಣನವರು ಅಭಿಪ್ರಾಯಪಟ್ಟರು.
ಇವರು ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಮಂಗಲ, PES ಪ್ರೌಢಶಾಲೆ ಮಂಡ್ಯ ಹಾಗೂ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಹಾಯದೊಡನೆ ಜರುಗಿದ ಮಹಿಳಾ ದೌರ್ಜನ್ಯ ವಿರೋಧಿ ಸಪ್ತಾಹ ಅಂಗವಾಗಿ ಅರಿವಿನ ಪಯಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಿದ್ದು, ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮೂಲಕ ಮಹಿಳಾ ದೌರ್ಜನ್ಯ, ಹೆಣ್ಣು ಭ್ರೂಣಹತ್ಯೆ, ಹೆಣ್ಣು ಶಿಶು ಹತ್ಯೆ, ಅತ್ಯಾಚಾರ, ಬಾಲ್ಯವಿವಾಹ, ಲೈಂಗಿಕ ಕಿರುಕುಳ ಮುಂತಾದವುಗಳನ್ನು ತಡೆಗಟ್ಟಲು ಯುವಜನರು ಜಾಗೃತರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅರಿವಿನ ಪಯಣ ನಾಟಕದ ಮೂಲಕ ಮಕ್ಕಳಲ್ಲಿ ಮಹಿಳಾ ದೌರ್ಜನ್ಯಗಳು ಕುರಿತು ಅರಿವು ಮೂಡಿಸಲಾಯಿತು ಹಾಗೂ ಮಕ್ಕಳಿಗೆ ಮಹಿಳಾ ದೌರ್ಜನ್ಯಕ್ಕೆ ಕಾರಣಗಳು ಹಾಗೂ ತಡೆಗಟ್ಟುವಲ್ಲಿ ನಮ್ಮ ಪಾತ್ರ ಕುರಿತು ಸಂವಾದ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಿಳಾ ಹೋರಾಟಗಾರ್ತಿ ಸಿ. ಕುಮಾರಿ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ಕೆ. ಪಿ. ಅರುಣಕುಮಾರಿ . ಮಹಿಳಾ ಮುನ್ನಡೆಯ ಪೂರ್ಣಿಮಾ, ವಿಕಸನ ಸಂಸ್ಥೆಯ ರಾಧಾಮಣಿ, ಮತ್ತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಕಲಾವಿದರು ಭಾಗವಹಿಸಿದ್ದರು.