ಜೇವರ್ಗಿ: ಅಕ್ಷರ ಕಲಿತ ಅಮ್ಮ ಸುಸಂಸೃತ ಸಮಾಜ ಕಟ್ಟುತ್ತಾಳೆ ಎಂಬುವುದನ್ನು ತೋರಿಸಿz ದೇಶದÀ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಎಂದು ಸೊನ್ನ ಎಸ್‍ಜಿಎಸ್‍ವಿ ಪದವಿ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಮಹಾಲಕ್ಷ್ಮೀ ಪದವಿ ಮಹಾವಿದ್ಯಾಲಯದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಶುಕ್ರವಾರ ಆಯೋಜಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಮಹಾರಾಷ್ಟ್ರದ ಪುನಾ ನಗರದಲ್ಲಿ ಜನಿಸಿದ ಮಾತೆ ಸಾವಿತ್ರಿಬಾಯಿ ಫುಲೆ ಈ ದೇಶದ ಮಹಿಳಾಲೋಕದ ದೃವತಾರೆ ಎಂದರೆ ತಪ್ಪಾಗದು ಎಂದರು.
ಬಡತನ, ದಾರಿದ್ರ್ಯ ಹೋಗಲಾಡಿಸಬೇಕಾದರೆ ಶಿಕ್ಷಣ ಬಹುಮುಖ್ಯ ಎಂದು ಅರಿತ ಸಾವಿತ್ರಿಬಾಯಿ ಫುಲೆ ಎಲ್ಲ ಮಹಿಳೆಯರಿಗೂ ಅಕ್ಷರ ಕಲಿಸಲು ಮುಂದಾದರು. ಪುರುಷ ಪ್ರಧಾನ ಸಮಾಜದಲ್ಲಿ ನಿತ್ಯ ನೀಡುತ್ತಿದ್ದ ಅವಮಾನಗಳನ್ನು ಸಹಿಸಿಕೊಂಡು ಮಹಿಳೆಯರಿಗೆ ಶಿಕ್ಷಣ ನೀಡಿದರು. ಮಹಿಳೆಯರು ಶಿಕ್ಷಣ ಕಲಿತು ಸ್ವಾವಲಂಬಿಗಳಾಗಬೇಕು. ಮಹಿಳೆಯರಲ್ಲಿ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆಯಲಿ ಎನ್ನುವ ಮಹಾದಾಸೆ ಹೊಂದಿದ್ದರು.
ಮಹಿಳೆಯರು ವೈಚಾರಿಕತೆಯ ಕಡೆಗೆ ಬಂದರೆ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾದ್ಯವಾಗುತ್ತದೆ ಎಂದು ನಂಬಿದ್ದರು. ಮಹಿಳಾ ವಿರೋಧಿಗಳು ಅವರನ್ನು ಅವಮಾನಿಸಲು ಮುಂದಾದರೂ ಸಹ ಛಲಬಿಡದೆ ಮಹಿಳೆಯರಿಗೆ ಅಕ್ಷರ ಕಲಿಸಲು ಮುಂದಾದ ಛಲಗಾತಿ ಫುಲೆ ಎಂದರು. ವಿವೇಕವಿಲ್ಲದ ಜನರು ಮಾನಸಿಕ ಗುಲಾಮರಾಗುತ್ತಾರೆ ಎಂದು ಅರಿತ ಮಾತೆ ಸಾವಿತ್ರಿಬಾಯಿ ಫುಲೆ ದೇಶದ ಮಹಿಳೆಯರಿಗೆ ಜ್ಞಾನದ ಹಸಿವನ್ನು ನೀಗಿಸಿದರು. ಇಂದಿನ ವಿದ್ಯಾರ್ಥಿನಿಯರು ಮಾತೆ ಸಾವಿತ್ರಿಬಾಯಿ ಫುಲೆ ಅವರು ಎದುರಿಸಿದ ಕಷ್ಟ ತಿಳಿದುಕೊಳ್ಳಬೇಕು. ಮಹಿಳೆಯರು ಈ ದೇಶದಲ್ಲಿ ಉನ್ನತ ಹುದ್ದೆ, ಅಧಿಕಾರ ಹೊಂದಿದ್ದರೆ ಅದರ ಶ್ರೇಯಸ್ಸು ಫುಲೆ ದಂಪತಿಗೆ ಸಲ್ಲುತ್ತದೆ. ಫುಲೆ ದಂಪತಿಗಳ ನಂತರ ಅವರ ಚಿಂತನೆಗಳನ್ನು ಸಂವಿಧಾನದಲ್ಲಿ ಆಳವಡಿಸಿದ್ದು ಡಾ.ಅಂಬೇಡ್ಕರ್ ಎಂದರು.
ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಧರ್ಮಣ್ಣ ಬಡಿಗೇರ, ಹೆಣ್ಣು ಅಂದರೆ ಬೋಗದ ವಸ್ತು ಎಂದು ತಿಳಿದ ಸಮಾಜಕ್ಕೆ ಹೆಣ್ಣು ಸಮಾಜದ ಕಣ್ಣು ಎಂದು ತೋರಿಸಿದ್ದು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ತೊಟ್ಟಿಲು ತೂಗುವ ಕೈಗಳು ಜಗತ್ತನ್ನು ತೂಗುತ್ತವೆ ಎನ್ನುವುದನ್ನು ಸಾವಿತ್ರಿಬಾಯಿ ಫುಲೆ ನಿಜ ಮಾಡಿ ತೋರಿಸಿದ್ದಾರೆ. ಇಂತಹ ಮಾತೆಯ ಜಯಂತಿ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲಾ ಕಾಲೇಜಿನಲ್ಲಿ ಆಚರಿಸುವಂತೆ ಸರಕಾರ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಆನಂದ ಕೆಲ್ಲೂರ, ಅಮರೇಶ ಬಿ.ಕೆ, ಸುನೀತಾ, ರೂಪಾ, ಶಾರದಾ ಬಿವಿಎಸ್ ಮುಖಂಡರಾದ ಜೈಭೀಮ ಸಿಂಗೆ, ಪರಶುರಾಮ ನಡಗಟ್ಟಿ, ವಿಶಾಲ ಮೇಲಿನಮನಿ, ಜೈಭೀಮ್ ನಡಗಟ್ಟಿ, ವಿಶ್ವ ಆಲೂರ, ಮಿಲಿಂದ ಸಾಗರ, ಶರಣು ಬಡಿಗೇರ ಸೇರಿದಂತೆ ಇತರರು ಇದ್ದರು. ರಾಜಕುಮಾರ ಕಟ್ಟಿಮನಿ ಸ್ವಾಗತಿಸಿದರು. ಶೃತಿ ಅವರಾದಿ ನಿರೂಪಿಸಿದರು. ಸಿದ್ದಲಿಂಗ ವಸ್ತಾರಿ ವಂದಿಸಿದರು.