ಸಾಧನೆಗಾಗಿ ಮಂತ್ರ; ದೇವರನ್ನು ಒಲಿಸಿಕೊಳ್ಳುವುದಕ್ಕಲ್ಲ

0
123
ಓಂ ನಮಃಶಿವಾಯ ಎಂಬ ಮಂತ್ರವ
ಮೀರಲ್ಲಮ್ಮದೆ ನಿಂದವು ವೇದ
ಓಂ ನಮಃಶಿವಾಯ ಎಂಬ ಮಂತ್ರವ
ಮೀರಲಮ್ಮದೆ ನಿಂದವು ಶಾಸ್ತ್ರ
ಓಂ ನಮಃಶಿವಾಯ ಎಂಬ ಮಂತ್ರವ
ಮೀರಲಮ್ಮದೆ ನಿಂದವು ತರ್ಕ
ಭಯಂಕರ ಭ್ರಮೆಗೊಂಡಿತ್ತು ಮಂತ್ರ-ತಂತ್ರ
ಶಿವನಂತುವನರಿಯದೆ ಚಿಂತಿಸುತ್ತಿದ್ದಿತ್ತು ಲೋಕ
ಕೂಡಲಸಂಗಮದೇವ ಶ್ವಪಚನ ಮೆರೆದಡೆ
ಜಾತಿಬೇಧವ ಮಾಡಲಮ್ಮವು
-ಬಸವಣ್ಣನವರು

ಬಸವಣ್ಣನೇ ಗುರುವಾದ ಕಾರಣ, ಬಸವನೇ ಶಿವ, ಶಿವನೇ ಬಸವ, ಬಸವಣ್ಣನಿಂದ ಬದುಕಿತ್ತೀ ಲೋಕ ಎಂಬಿತ್ಯಾದಿ ಶರಣರ ವಚನಗಳು ಶಿವ ಬೇರೆ ಅಲ್ಲ. ಬಸವಣ್ಣ ಬೇರೆ ಅಲ್ಲ ಎಂಬುದನ್ನು ವಿವರಿಸುವಂತಿವೆ. ಬ-ಕಾರ ಗುರು, ಸ-ಕಾರ ಲಿಂಗ, ವ-ಕಾರ ಜಂಗಮ. ಸೃಷ್ಟಿ, ಸ್ಥಿತಿ, ಲಯ ಬಸವಣ್ಣ. ಅ- ಕಾರ, ಉ- ಕಾರ, ಮ- ಕಾರ ಸ್ವರೂಪವೇ ಬಸವಣ್ಣ. ಶರಣರ ಈ ಮಾತುಗಳು ಬಸವಣ್ಣನವರ ಮೇರು ವ್ಯಕ್ತಿತ್ವಕ್ಕೆ ಕನ್ನಡಿಯಾಗಿವೆ. ಬೀಜದೊಳಗೆ ಅಂಕುರ, ಅಂಕುರದೊಳಗೆ ಬೀಜ ಅಡಗಿರುವಂತೆ ಬಸವಣ್ಣ ನಮ್ಮೊಳಗೆ ಆವಿರ್ಭವಿಸಬೇಕು ಎಂದು ಷಣ್ಮುಖ ಶಿವಯೋಗಿಗಳು ಹೇಳುತ್ತಾರೆ. ದೇಹ-ಶರೀರ ಎಂಬ ಹೊರಗಿನ ಸಿಪ್ಪೆ ಕಾಣುತ್ತದೆ. ಆದರೆ ಅದರೊಳಗಡಗಿರುವ ಸೃಷ್ಟಿಯ ಚೈತನ್ಯ ಕಂಡು ಬರುವುದಿಲ್ಲ. ಗಿಡದ ಅಸ್ತಿತ್ವವೇ ಬೀಜ ಆಗಿರುವಂತೆ ಮಾನವನ ದೇಹ ಒಂದು ಸಣ್ಣ ಬಿಂದು . ಸಣ್ಣ ಬೀಜ!

Contact Your\'s Advertisement; 9902492681

ಕಣ್ಣಿಗೆ ಗೋಚರಿಸುವ ಅಥವಾ ಸೃಷ್ಟಿಯೊಳಗಿನ ವಸ್ತುವಿಗೆ ಯಾವುದೋ ಒಂದು ಹೆಸರಿಟ್ಟು ಕರೆಯುತ್ತೇವೆ. ಆದರೆ ಅದರ ಒಳಗಡೆ ಅಸ್ತಿತ್ವವಿದೆ. ಸಾಧನೆಯಿಂದ ಮಾತ್ರ ಈ ಅಸ್ತಿತ್ವದ ಸಾಕಾರ ಸಾಧ್ಯ. ಇದನ್ನೇ ಬಸವಣ್ಣನವರು “ಅಕ್ಷರವಿಡಿದು ಗುರು ಕಾಂಬಂತೆ, ಅನ್ನವ ಕೊಂಡು ಚೈತನ್ಯವ ಕಾಂಬಂತೆ, ಸತಿವಿಡಿದು ನಿರ್ವಾಣಸತಿಯ ಕಾಂಬಂತೆ” ಎಂದು ಹೇಳಿದ್ದಾರೆ. ನಾವುಗಳು ಕೇವಲ ದೇಹ ಮತ್ತು ಮನಸ್ಸನ್ನು ಮಾತ್ರ ಬಳಸುತ್ತಿದ್ದೇವೆ. ಆದರೆ ಮೆದುಳನ್ನು ಬಳಸುತ್ತಿಲ್ಲ. ಇದಕ್ಕೆ ಅಗತ್ಯವಾದ ಸಾಧನಗಳನ್ನು ಉಪಯೋಗಿಸುತ್ತಿಲ್ಲ. ತಾಯ ಗರ್ಭದಿಂದ ಹೊರಗೆ ಬರುವ ಮಗುವಿನ ರೂಪವೇ ಬೇರೆ! ಅಸ್ತಿತ್ವವೇ ಬೇರೆ!! “ಜಲ ಬಿಂದುವಿನ ವ್ಯವಹಾರ ಒಂದೇ”. ಹೀಗಾಗಿ ಪ್ರತಿಯೊಬ್ಬರೂ ಮಂತ್ರ ಸಾಧನದ ಕಡೆ ಹೆಚ್ಚಿನ ಗಮನಕೊಡಬೇಕು.

ಮನುಷ್ಯನಿಗೆ ಗುರುವಿನ ಸಂಸ್ಕಾರ, ಮಹಾತ್ಮರ ಮಾರ್ಗದರ್ಶನ, ಉತ್ತಮರ ಒಡನಾಟ ಅಗತ್ಯ. ಆ ಮೂಲಕ ಒಳಗಿನ ಬೀಜವೆಂಬ ಚೈತನ್ಯವನ್ನು ಉದ್ದೀಪನಗೊಳಿಸಿಕೊಳ್ಳಬೇಕು. ಆಗ ಸಸ್ಯ ಶಾಮಲೆಯಂತೆ ಸ್ವಚ್ಛ, ಸುಂದರ, ಪ್ರಸನ್ನ ಮನಸ್ಸು ನಿರ್ಮಾಣವಾಗುತ್ತದೆ. ನಮ್ಮನ್ನು ರಚನೆ ಮಾಡಿರುವ ದೇವರು ಸೃಷ್ಟಿಯಲ್ಲಿ ನಮ್ಮನ್ನು ಹಿಡಿದಿಟ್ಟುಕೊಂಡಿದ್ದಾನೆ. ಮನಷ್ಯ ಪ್ರಕೃತಿಯ ಕೂಸಾಗಿದ್ದರೂ ರೂಪ, ಹಣ, ಆಸ್ತಿಯ ಬೆನ್ನು ಹತ್ತಿ, ಆಸೆಯ ಆಗರದಲ್ಲಿ ಮುಳುಗಿ ಸತ್ಯದ ನಿಲವನ್ನರಿಯದೆ ಬದುಕನ್ನು ಭವ ಘೋರಾರಣ್ಯ ಮಾಡಿಕೊಂಡಿದ್ದಾನೆ. “ನಿಮ್ಮನರಿಯದ ಜ್ಞಾನವೆಲ್ಲವೂ ಅಜ್ಞಾನ ನೋಡಾ” ಎನ್ನುವಂತಿರುವ ಬದುಕಿಗೆ ಮಂತ್ರ ಸಾಧನೆ ಮೂಲಕ ಜೀವನದ ಕ್ರಮ, ನಿಯಮ ಹಾಕಿಕೊಳ್ಳಬೇಕಿದೆ.

ಈ ಬದುಕು ಬಹಳ ಆನಂದ. ಬದುಕನ್ನು ಕ್ರಮಬದ್ಧಗೊಳಿಸಿಕೊಳ್ಳಬೇಕು, ಚೆನ್ನಾಗಿ ರೂಪಿಸಿಕೊಳ್ಳಬೇಕು. ವ್ಯಸನಮುಕ್ತರಾಗಿ ಬಾಳಬೇಕು. ಕೊಲುವೆನೆಂಬ ಭಾಷೆ ದೇವನದಾದರೆ, ಗೆಲುವೆನೆಂಬ ಭಾಷೆ ಭಕ್ತನದಾಗಬೇಕು. ಸತ್ಯವೆಂಬ ಕೂರಲಗನ್ನು ಹಿಡಿದು ಸದ್ಭಕ್ತರು ಗೆದ್ದರು ಎನ್ನುವಂತಿರಬೇಕು. ಧ್ಯಾನ,ಯೋಗ,ಮಂತ್ರಗಳು ಬದುಕಿನ ಆನಂದಕ್ಕಾಗಿ ಇವೆ. ಸಾಧನೆಗಾಗಿ ಮಂತ್ರ ಹೊರತು, ದೇವರನ್ನು ಒಲಿಸಿಕೊಳ್ಳುವುದಕ್ಕೆ ಅಲ್ಲ. ಕಾವಿ ತೊಟ್ಟವರೆಲ್ಲ ಗುರುಗಳಲ್ಲ. ವಿಭೂತಿ ಧರಿಸಿದವರೆಲ್ಲರೂ ಶಿಷ್ಯರಲ್ಲ. ಗುರು-ಜಗದ್ಗುರುಗಳಿಗೆ ಸಾಧನೆ ಬೇಕು. ಥಳಕು ಬಳುಕಿನ ಜೀವನ ಯಾರಿಗೂ ಬೇಡ. ಇದನ್ನೇ ಬಸವಣ್ಣನವರು “ಲಾಂಛನಕ್ಕೆ ಶರಣೆಂಬೆ ಲಾಂಛನಕ್ಕೆ ತಕ್ಕ ನಡೆಯಿಲ್ಲದಿದ್ದಡೆ ಛೀ ಎಂಬೆ” ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ತನ್ನ ಭಕ್ತರಿಗಾಗಿ ಬದುಕಿದ ಗುರು ಇದ್ದರೆ ಅದು ವಿಶ್ವಗುರು ಬಸವಣ್ಣನವರು ಒಬ್ಬರೇ! ಭಕ್ತ ಶ್ರೀಮಂತಗೊಳ್ಳಬೇಕು. ಗುರು ಬಡವನಾಗಬೇಕು ಎನ್ನುವಂತಿದ್ದರು ಅವರು. ಹೀಗಾಗಿ ಲಿಂಗಯತರಿಗೆ ಬಸವಣ್ಣನೇ ಗುರು. ವಚನಶಾಸ್ತ್ರವೇ ಧರ್ಮ ಗ್ರಂಥ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಷಟಸ್ಥಲಗಳ ಆಧಾರದ ಮೂಲಕ ಮಂತ್ರ ಸಾಧನೆ ಮಾಡಬೇಕು. “ನಮಃ ಶಿವಾಯ ಓಂ ಬಸವ” ಸಧನೆಯ ಮಂತ್ರವಾಗಬೇಕು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here