ಕಲಬುರಗಿ: 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಇಂದು ಆರು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಶ್ರೀವಿಜಯ ವೇದಿಕೆಯಲ್ಲಿ ಬಹಿರಂಗ ಅಧಿವೇಶನ ನಿರ್ಣಯ ಅಂಗೀಕರಿಸಲಾಯಿತು.
ಕಸಾಪ ಅಧ್ಯಕ್ಷ ಮನು ಬಳಿಗಾರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ನಿರ್ಣಯ ಮಂಡನೆ ಮಾಡಿದರು.
85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ 6 ಪ್ರಮುಖ ನಿರ್ಣಯಗಳು ಇಂತಿವೆ :
- ರಾಜ್ಯದಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕಡ್ಡಾಯಗೊಳಿಸಬೇಕು.
- 371(ಜೆ) ಕಲಂ ತಿದ್ದುಪಡಿಯ ಲೋಪದೋಷಗಳನ್ನು ಸರಿಪಡಿಸಬೇಕು, ಸಮರ್ಪಕ ಅನುಷ್ಠಾನ ಕ್ರಮ ಕೈಗೊಳ್ಳಬೇಕು.
- ಕಲ್ಯಾಣ ಕರ್ನಾಟಕ ಐತಿಹಾಸಿಕ ತಾಣಗಳ ಅಭಿವೃದ್ಧಿ.
- ಗಡಿಯಲ್ಲಿನ ಕನ್ನಡ ಶಾಲೆಗಳನ್ನು ಮುಚ್ಚದಂತೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಆಗ್ರಹ.
- ಗಡಿ ವಿಷಯದಲ್ಲಿ ಮಹಾರಾಷ್ಟ್ರದ ಉದ್ಧಟತನಕ್ಕೆ ಖಂಡನೆ.
- ಮಹಾಜನ್ ವರದಿಯೇ ಅಂತಿಮ, ಅದನ್ನ ಅನುಷ್ಠಾನಕ್ಕೆ ತಂದು ವಿವಾದ ಕೊನೆಗಾಣಿಸಲು ಆಗ್ರಹ
ಹೀಗೆ ಸೇರಿ 6 ನಿರ್ಣಯಗಳನ್ನು ಅಂಗೀಕಾರ ಮಾಡಲಾಯಿತು. ಮುಂದಿನ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಲಬುರ್ಗಿಯ ಜಿಡಿಎ ಕಛೇರಿ ಸಭಾಂಗಣದಲ್ಲಿ ನಿನ್ನೆ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿಣಿ ಸಭೆಯಲ್ಲಿ ಈ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.