ಸುರಪುರ: ಭೀಮರಾಯನಗುಡಿ ಕೆಬೆಜೆಎನ್‌ಎಲ್ ಸಿಇಯವರ ವ್ಯಾಪ್ತಿಯ ಡಿಸ್ಟ್ರೀಬ್ಯೂಟರ್ ೬ರ ಅಡಿಯ ಲ್ಯಾಟರಲ್ ಸಂಖ್ಯೆ ೧೨ರ ಸಬ್ ಲ್ಯಾಟರಲ್ ೬ ಮತ್ತು ೮ ರ ಕಾಳುವೆಗಳು ಸಂಪೂರ್ಣ ಹಾಳಾಗಿದ್ದು ಕೆಬಿಜೆಎನ್‌ಎಲ್ ಭೀಮರಾಯನಗುಡಿ ಕಚೇರಿಯ ಸಿಇ ಅವರು ನಿರ್ಲಕ್ಷ್ಯ ತೋರುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸುವುದಾಗಿ ಹಾಗು ಕಾಲುವೆಗಳನ್ನು ದುರಸ್ಥಿಗೊಳಿಸದಿದ್ದರೆ ಕೆಬಿಜೆಎನ್‌ಎಲ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿದರು.
ನಗರದ ಬಸ್ ನಿಲ್ದಾಣ ಬಳಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಸಬ್ ಲ್ಯಾಟರಲ್ ಕಾಲುವೆಗಳು ಹಾಳಾಗಿದ್ದರಿಂದ ರೈತರ ಜಮೀನುಗಳಿಗೆ ನೀರು ಮುಟ್ಟುತ್ತಿಲ್ಲ,ಆದರೆ ಕಾಲುವೆಗಳು ಹೊಡೆದಿದ್ದರಿಂದ ಎಲ್ಲೆಂದರಲ್ಲಿ ವ್ಯರ್ಥ ನೀರು ಹರಿದು ಹೋಗುತ್ತಿದೆ.ಇದಕ್ಕೆ ಅಧಿಕಾರಿಗಳ ಬೇಜವಬ್ದಾರಿತನವೇ ಕಾರಣವಾಗಿದೆ.ಹಿಂದೆ ಸರಕಾರ ಕಾಲುವೆಗಳ ರೀಮಾಡಲಿಂಗ್‌ಗಾಗಿ ಹಣ ನೀಡದೆ,ಅಲ್ಲದೆ ಕ್ಲೋಸರ್ ಹಣ ಮತ್ತು ಸ್ಫೇಶಲ್ ರಿಪೇರಿ ಹಣ ಸರಿಯಾಗಿ ಬಳಸಿಕೊಳ್ಳದ್ದರಿಂದ ಹಿಂದೆ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲರು ಇಲ್ಲಿಯ ಹಣವನ್ನು ಬಬಲೇಶ್ವರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಕೊಂಡು ಅಲ್ಲಿ ಅಭಿವೃಧ್ಧಿ ಮಾಡಿಕೊಂಡಿದ್ಧಾರೆ.ಇವೆಲ್ಲವುಗಳ ತನಿಖೆಯಾಗಲಿ ಮತ್ತು ಕಾಲುವೆಗಳ ದುರಸ್ಥಿ ಮಾಡದೆ ಬೆಜವಬ್ದಾರಿತನ ಮೆರೆಯುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರೈತ ವಿರೋಧಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಇದೇ ತಿಂಗಳ ೨೪ನೇ ತಾರೀಖು ಭಿಮರಾಯನಗುಡಿ ಕೆಬಿಜೆಎನ್‌ಎಲ್ ಕಚೇರಿ ಮುಂದೆ ರೈತರೊಂದಿಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ,ನಂತರ ನೀರಾವರಿ ಸಚಿವರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ರೈತ ಘಟಕದ ಅಧ್ಯಕ್ಷ ಗೋಪಾಲ ಬಾಗಲಕೋಟೆ,ಜೆಡಿಎಸ್ ಮುಖಂಡ ಉಸ್ತಾದ ವಜಾಹತ್ ಹುಸೇನ್,ಮಾನಯ್ಯ ದೊರೆ,ಶರಣಪ್ಪಗೌಡ ಪಾಲೀಸ್ ಪಾಟೀಲ್,ದೇವಿಂದ್ರಪ್ಪ ಟಿ ಸೇರಿದಂತೆ ಅನೇಕರಿದ್ದರು.