ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ಅನುದಾನದಿಂದ ನಡೆಯುತ್ತಿರುವ ೧೮೧೩ ಮನೆಗಳ ಹಂಚಿಕೆ ಕುರಿತು ಪ್ರಸ್ತುತ ಇರುವ ಸ್ಥಿತಿಯಲ್ಲಿಯೆ ನಿವೇಶನ ಪಡೆದುಕೊಂಡು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೧.೫ ಲಕ್ಷ ರೂ. ಗಳ ಸಹಾಯಧನದಿಂದ ಪಕ್ಕಾ ಮನೆ ಕಟ್ಟಿಕೊಂಡು ವಾಸವಾಗಿರಲು ಫಲಾನುಭವಿಗಳು ಮಹಾನಗರ ಪಾಲಿಕೆಗೆ ಶಪಥ ಪತ್ರ ಸಲ್ಲಿಸಬೇಕು ಎಂದು ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ತಿಳಿಸಿದ್ದಾರೆ.
೧೮೧೩ ಮನೆಗಳ ಪೈಕಿ ಕೇಸರಟಗಿ ಗ್ರಾಮದ ಸರ್ವೆ ನಂ. ೨೭/೨೮ರ ೭೮೦ ಮನೆಗಳು ಹಾಗೂ ಜಾಫರಾಬಾದ ಗ್ರಾಮದ ಸರ್ವೆ ನಂ. ೭೨/೭೩ ಮತ್ತು ಪಲ್ಲಾಪುರ ಗ್ರಾಮದ ಸರ್ವೆ ನಂ: ೬/೭೩ರ ೬೫೨ ಮನೆಗಳು, ಜಾಫರಾಬಾದ ಗ್ರಾಮದ ಸರ್ವೆ ನಂ. ೭೫/೭೬, ಎಸ್.ಎಂ.ಕೃಷ್ಣ ಆಶ್ರಯ ಕಾಲೋನಿ ಮನೆಯ ಸಂಖ್ಯೆ: ೧೨೦೧ ರಿಂದ ೧೩೯೬ ವರೆಗಿನ ಮನೆಗಳು ಹಂಚಿಕೆಯಾಗದೆ ಹಾಗೇ ಉಳಿದಿರುತ್ತವೆ.
ಇದಕ್ಕೆ ಸಂಬಂಧಿಸಿದ ಫಲಾನುಭವಿಗಳು ತಾವು ಯಥಾ ಸ್ಥಿತಿಯಲ್ಲಿ ಮನೆಗಳನ್ನು ಪಡೆದುಕೊಂಡು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ೧.೫ ಲಕ್ಷ ರೂ. ಗಳ ಸಹಾಯಧನದಿಂದ ಪಕ್ಕಾ ಮನೆ ಕಟ್ಟಿಕೊಂಡು ವಾಸವಾಗಿರುತ್ತೆನೆಂದು ಆಯುಕ್ತರು, ಮಹಾನಗರ ಪಾಲಿಕೆ ಕಲಬುರಗಿ ಇವರಲ್ಲಿ ೨೦ ರೂ. ಛಾಪಾ ಕಾಗದ ಮೇಲೆ ಶಪಥ ಪ್ರಮಾಣ ಪತ್ರದೊಂದಿಗೆ ಹಕ್ಕು ಪತ್ರದ ಪ್ರತಿ, ಫಲಾನುಭವಿ ಆಧಾರ ಕಾರ್ಡ (ಪತಿ/ಪತ್ನಿ), ರೇಷನ್ ಕಾರ್ಡ, ಚುನಾವಣೆ ಗುರುತಿನ ಚೀಟಿ, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಹಾಗೂ ಫಲಾನುಭವಿಯ ೨ ಭಾವಚಿತ್ರಗಳನ್ನು ಪಾಲಿಕೆಯ ಕೋಣೆ ಸಂಖ್ಯೆ ೪೭ ರಲ್ಲಿ ೨೦೨೦ರ ಮಾರ್ಚ್ ೦೫ ರೊಳಗಾಗಿ ಸಲ್ಲಿಸುವಂತೆ ಆಯುಕ್ತರು ಸೂಚಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದ ಅನುದಾನದಿಂದ ನಡೆಯುತ್ತಿರುವ ೧೮೧೩ ಮನೆಗಳ ನಿರ್ಮಾಣ ಕಾರ್ಯವು ವಿವಿಧ ಕಾರಣದಿಂದ ತಳಪಾಯ, ನಿಂಟಲ್, ಛಾವಣಿ ಸೇರಿದಂತೆ ವಿವಿಧ ಹಂತದಲ್ಲಿವೆ. ಫಲಾನುಭವಿಗಳಿಗೆ ಸಕಾಲದಲ್ಲಿ ಬ್ಯಾಂಕ್ ಸಾಲ ದೊರೆಯದ ಕಾರಣವು ನಿರ್ಮಾಣ ಕಾರ್ಯ ನೆನಗುದ್ದಿಗೆ ಬಿದ್ದಿದೆ.
ಈ ಕುರಿತು ದಿ.೦೫-೧೨-೨೦೧೯ ರಂದು ಟೌನ್ ಹಾಲ್‌ನಲ್ಲಿ ಫಲಾನುಭವಿಗಳ ಸಮಕ್ಷಮ ನಡೆದ ಸಭೆಯ ತೀರ್ಮಾನದಂತೆ ಈಗಾಗಲೆ ವಂತಿಗೆ ಪಾವತಿಸಿ ಹಕ್ಕುಪತ್ರ ಪಡೆದಿರುವ ಆಶ್ರಯ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯ ಫಲಾನುಭವಿಗಳು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೧.೫ ಲಕ್ಷ ರೂ. ಸಹಾಯಧನದಿಂದ ಪಕ್ಕಾ ಮನೆ ಕಟ್ಟಿಕೊಂಡು ವಾಸವಾಗಿರುತ್ತೇವೆಂದು ತಿಳಿಸಿ ಮನೆ ಹಸ್ತಾಂತರ ಮಾಡುವಂತೆ ಕೋರಿದ್ದರು.