ಕಲಬುರಗಿ: ದೇಶದ ಭವಿಷ್ಯತ್ತಿನ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಶಿಕ್ಷಣ ನಿಕಾಯದ ಡೀನ್ ಪ್ರೊ. ಬಾಬಣ್ಣ ಹೂವಿನಬಾಯಿ ಅಭಿಪ್ರಾಯಪಟ್ಟರು.
ಶನಿವಾರ ಆಳಂದ ಪಟ್ಟಣದ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ರಾಜಶೇಖರ ಮಹಾಸ್ವಾಮೀಜಿ ಬಿ.ಎಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿ.ಎಡ್ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹೊಸ ಶಿಕ್ಷಣ ನೀತಿಯಲ್ಲಿ ಹಲವಾರು ಉತ್ತಮ ಕೌಶಲಗಳನ್ನು ಪರಿಚಯಿಸಲಾಗಿದೆ ಆ ಕೌಶಲಗಳನ್ನು ಬಳಸಿಕೊಂಡು ನೈತಿಕತೆಯಿಂದ ಪರಿಣಾಮಕಾರಿಯಾಗಿ ಬೋಧನೆ ಮಾಡಿದರೇ ಉತ್ತಮ ವಿದ್ಯಾರ್ಥಿಗಳನ್ನು, ರಾಷ್ಟ್ರವನ್ನು ನಿರ್ಮಾಣ ಮಾಡಬಹುದಾಗಿದೆ ಎಂದು ಹೇಳಿದರು. ಟನ್‌ಗಟ್ಟಲೇ ಸಿದ್ಧಾಂತಗಳಿಗಿಂತ ಒಂದು ಅಣುವಿನಷ್ಟು ಪ್ರಾಯೋಗಿಕ ವಿಧಾನದ ಕಲಿಕೆ ಹೆಚ್ಚು ಬಾಳಿಕೆ ಬರುತ್ತದೆ ಅದಕ್ಕಾಗಿ ಪ್ರಶಿಕ್ಷಾಣಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು, ಹೆಚ್ಚು ಪ್ರಾಯೋಗಿಕ ವಿಧಾನಕ್ಕೆ ಒತ್ತು ಕೊಡಬೇಕು ಈ ನಿಟ್ಟಿನಲ್ಲಿ ಭೋಧನಾ ವೃತ್ತಿಗೆ ಬರಬೇಕು ಎನ್ನುವವರು ವಿಷಯದ ಮೇಲೆ ಪ್ರಭುತ್ವವನ್ನು ಸಾಧಿಸಲು ಯತ್ನಿಸಬೇಕು ಎಂದರು.
ಆಳಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಬಿರಾದಾರ ಕಾಶಿನಾಥ, ಚಿತ್ತಾಪುರದ ಗಂಗಾ ಪರಮೇಶ್ವರಿ ಬಿ.ಎಡ್ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಬಿರಾದಾರ, ಸಾನಿಧ್ಯ ವಹಿಸಿದ್ದ ನಂದಗಾಂವನ ರಾಜಶೇಖರ ಸ್ವಾಮೀಜಿ ಮಾತನಾಡಿದರು. ವೇದಿಕೆಯ ಮೇಲೆ ಶಾಸಕರೂ ಹಾಗೂ ಸಂಸ್ಥೆಯ ಅಧ್ಯಕ್ಷರೂ ಆದ ಸುಭಾಷ್ ಆರ್ ಗುತ್ತೇದಾರ, ಮುಖಂಡ ರಾಜಶೇಖರ ಮಲಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ, ಆಂಗ್ಲ್ ಮಾಧ್ಯಮ ಶಾಲೆಯ ಪ್ರಾಚಾರ್ಯೆ ಜೆಎನ್‌ಎಸ್ ಕಿರಣ್ಮಯಿ ಇದ್ದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಸಂಸ್ಥೆಯ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ, ಬಿ.ಎಡ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ೧೦ನೇ ರ‍್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿ ರೇಶ್ಮಾ ಮೆಹಬೂಬ್ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಅಶೋಕರೆಡ್ಡಿ ಸ್ವಾಗತಿಸಿದರು. ನಾಗೇಂದ್ರ ಚಿಕ್ಕಳ್ಳಿ ವಂದಿಸಿದರು. ಪ್ರಾಧ್ಯಾಪಕಿ ನಿರ್ಮಲಾ ಶಾಂತಕುಮಾರ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಶೋಕ ನಾಡಗೇರಿ, ಶರಣಬಸಪ್ಪ ಕಂದಗೋಳ, ಸುನೀಲ ಢಗೆ, ರಾಜಕುಮಾರ ಹರಳಯ್ಯ, ಮಲ್ಲಿನಾಥ ಗಣಪತಿ, ಅರುಣ ಮೇಲಿನಕೇರಿ ಸೇರಿದಂತೆ ಇತರರು ಇದ್ದರು.