ಕಲಬುರಗಿ: ನಾಡಿನ ಹಿರಿಯ ಸಾಹಿತಿಗಳಾದ ಗವೀಶ ಹಿರೇಮಠರ “ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ” ಕೃತಿಗೆ 2018ರ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ 25,000 ನಗದು, ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆಯೆಂದು ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಗವೀಶ ಹಿರೇಮಠ ನಾಡಿನ ಹಿರಿಯ ಸಾಹಿತಿಗಳಲ್ಲೊಬ್ಬರು. ಸುಮಾರು 50ಕ್ಕೂ ಮಿಕ್ಕಿ ಕೃತಿಗಳನ್ನು ಸಾರಸ್ವತ ಪ್ರಪಂಚಕ್ಕರ್ಪಿಸಿದ್ದಾರೆ. ನಾಡಿನ, ಹೊರ ನಾಡಿನ ಸಂಘ ಸಂಸ್ಥೆಗಳ ವಿಚಾರ ಸಂರ್ಕೀಣಗಳಲ್ಲಿ ಭಾಗವಹಿಸಿ, ವಿವಿಧ ವಿಷಯಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.
ಕರ್ನಾಟಕ ಲಲಿತಕಲಾ ಅಕಾಡೆಮಿ, ಗುಲಬರ್ಗಾ ವಿ.ವಿ ಹಾಗೂ ಸಂಘ ಸಂಸ್ಥೆಗಳಿಂದ ಅವರ ಹಲವಾರು ಕೃತಿಗಳಿಗೆ ಪ್ರಶಸ್ತಿ ಲಭಿಸಿವೆ. ಕಳೆದ ಸಾಲಿನಲ್ಲಿ ಗುಲ್ಬರ್ಗಾ ಆಕಾಶವಾಣಿಗೆ ನಾಟಕ ಕಂಪನಿಗಳ ಬಗ್ಗೆ ರಚಿಸಿಕೊಟ್ಟ “ರಂಗದೀವಿಗೆಗಳು” ಎನ್ನುವ ಮಾಲಿಕೆ ನಾಡಿನ ಎಲ್ಲಾ ಬಾನುಲಿಗಳಿಂದ ಪ್ರಸಾರ ಹೊಂದಿದ್ದಲ್ಲದೆ ಗುಲ್ಬರ್ಗಾ ಆಕಾಶವಾಣಿಗೆ ಉತ್ತಮ ನಿರ್ಮಾಣ ಎಂದು ರಾಜ್ಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಬಂದಿದೆ.
ಗವೀಶ ಹಿರೇಮಠರ ಬದುಕು-ಬರಹ ಎನ್ನುವ ಮಹಾಪ್ರಬಂಧ ರಚಿಸಿ ಗುಲ್ಮಾರ್ಗ ವಿ.ವಿ ಯಿಂದ ಗಿರಿಮಲ್ಲ.ಕೆ, ಅವರು ಡಾಕ್ಟರೇಟ್ ಪದವಿ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.