ಸುರಪುರ: ಕಳೆದ ಮೂರು ದಿನಗಳ ಹಿಂದೆ ನಗರದ ಬಸ್ ಡಿಪೋದಲ್ಲಿ ಚಾಲಕರಾದ ಗಿರೀಶ,ಬಾಬು ರಾಠೋಡ ಮತ್ತು ಸಂತೋಷ ಪವಾರ್ ಎಂಬುವವರ ಮದ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಹೊಡೆದಾಡಿಕೊಂಡಿದ್ದ ಘಟನೆ ನಡೆದಿತ್ತು.ಈ ಘಟನೆ ಕುರಿತು ತನಿಖೆ ನಡೆಸಲು ಡಿಪೋ ವ್ಯವಸ್ಥಾಪಕರು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಭಯಗೊಂಡು ಬಾಬು ರಾಠೋಡ ಮತ್ತು ಸಂತೋಷ ಪವಾರ ಎಂಬ ಚಾಲಕರು ನಾಪತ್ತೆಯಾಗಿದ್ದು,ಇವರನ್ನು ಹುಡಿಕಿಸಿಕೊಡುವಂತೆ ಅವರ ಪೋಷಕರು ಶುಕ್ರವಾರ ಬೆಳಿಗ್ಗೆ ಸುರಪುರ ಬಸ್ ಡಿಪೋಗೆ ಅನೇಕ ಜನ ಬಂಜಾರ ಸಮುದಾಯದ ಮುಖಂಡರೊಂದಿಗೆ ಆಗಮಿಸಿ ಡಿಪೋ ಮ್ಯಾನೆಜರ್ ರಡ್ಡಿಯವರಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಜಿಲ್ಲಾ ಉಪಾಧ್ಯಕ್ಷ ಬಾಸು ನಾಯಕ ಮತ್ತಿತರರು ಮಾತನಾಡಿ,ಡಿಪೋದಲ್ಲಿ ನಡೆದ ಘಟನೆಯನ್ನು ಇಲ್ಲಿಯ ಮೇಲಾಧಿಕಾರಿಗಳು ಇಬ್ಬರಿಗೆ ಬುಧ್ದಿ ಹೇಳದೆ ಪ್ರಕರಣ ದಾಖಲಿಸಿದ್ದಾರೆ.ಇದರಿಂದ ಭಯಗೊಂಡ ಬಾಬು ರಾಠೋಡ ಮತ್ತು ಸಂತೋಷ ಪವಾರ್ ಎಲ್ಲಿ ಹೋಗಿದ್ದಾರೆ ಎಂಬುದು ಪೋಷಕರು ತಿಳಿಯದೆ ಭಯಗೊಂಡಿದ್ದಾರೆ.ಆದ್ದರಿಂದ ಈ ಇಬ್ಬರು ವ್ಯಕ್ತಿಗಳನ್ನು ಹುಡುಕಿಸಿ ಕೊಡುವಂತೆ ಡಿಪೋ ವ್ಯವಸ್ಥಾಪಕರಿಗೆ ಒತ್ತಾಯಿಸುತ್ತೆವೆ ಎಂದರು.ಇದರಿಂದ ಕೆಲ ಕಾಲ ಡಿಪೋದಲ್ಲಿರುವ ಯಾವುದೆ ಬಸ್‌ಗಳು ಹೊರ ಹೋಗದಂತೆ ತಡೆದಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ವಿಷಯ ತಿಳಿದು ಸುರಪುರ ಠಾಣೆಯ ಉಪ ನಿರೀಕ್ಷಕ ಸೋಮಲಿಂಗಪ್ಪ ಒಡೆಯರು ಮತ್ತವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬಂಜಾರ ಮುಖಂಡರ ಮನವಿಯನ್ನು ಆಲಿಸಿ,ನಂತರ ವ್ಯವಸ್ಥಾಪಕರೊಂದಿಗೆ ಘಟನೆಯ ಬಗ್ಗೆ ಚರ್ಚಿಸಿದರು.ಡಿಪೊ ವ್ಯವಸ್ಥಾಪಕರು ಗಲಾಟೆಯಲ್ಲಿ ಭಾಗಿಯಾಗಿರುವ ಮೂರು ಜನ ಸಿಬ್ಬಂದಿಯನ್ನು ಕರೆದು ಬುಧ್ದಿವಾದ ಹೇಳುವುದಾಗಿ ಭರವಸೆ ನೀಡಿದ ನಂತರ ಪರಿಸ್ಥಿತಿ ಶಾಂತವಾಯಿತು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಭಾಸು ನಾಯಕ,ಜಯರಾಮ ನಾಯಕ,ಬಾಲಚಂದ್ರ ನಾಯಕ,ನೀಲಪ್ಪ ಪವಾರ್,ಈಶ್ವರಪ್ಪ ಪವಾರ್,ಶಾಂತಿಲಾಲ ರಾಠೋಡ,ಮಾನಪ್ಪ ಚವ್ಹಾಣ,ಜಯರಾಮ್ ಪವಾರ್,ರೇವಣಪ್ಪ ನಾಯಕ,ನಿಂಗಾ ನಾಯಕ ಸೇರಿದಂತೆ ಅನೇಕರಿದ್ದರು.