ಕಪ್ಪು ಹಣ ಧಿಕ್ಕರಿಸಿದ ಶರಣರು

0
61

ತಾವು ಕಂಡುಂಡು ನಿಜಾನಂದದಲ್ಲಿ ಓಲಾಡಿದ ಶರಣರು ನಿಜ ದೇವರನ್ನು ಜನರಿಗೆ ತೋರಿಸಿದರು. ಆ ದಿಸೆಯಲ್ಲಿ ಅವರು ನೀಡಿದ ಉದಾಹರಣೆ, ಕೊಟ್ಟ ಉಪಮೆ, ಉಪಮಾನಗಳು ನಿಜಕ್ಕೂ ಬೆರಗು ಹುಟ್ಟಿಸುವಂತಿವೆ. ಪಕ್ಕಾಪ್ರಯೋಗಾತ್ಮಕ, ಮೂಲವಿಜ್ಞಾನದಿಂದ ಕೂಡಿದ ದೇವರು, ಧರ್ಮದ ಬಗ್ಗೆ ತಿಳಿ ಹೇಳಿದ ಅವರಿಗೆ ಸಮಾಜದಲ್ಲಿ ಹಬ್ಬಿರುವ ಭ್ರಷ್ಟಾಚಾರ, ಕಳ್ಳತನ, ಮೋಸವನ್ನು ತೆಗೆದು ಹಾಕಿ ಆ ಜಾಗದಲ್ಲಿ ಪ್ರಾಮಾಣಿಕತೆ, ಸತ್ಯ ಮತ್ತು ನ್ಯಾಯ-ನೀತಿಯನ್ನು ತುಂಬುವುದಾದ ಪ್ರಮುಖ ಧ್ಯೇಯವಾಗಿತ್ತು.

ನಾವು ಗಳಿಸಿದ ಹೊಲ-ಮನೆ, ಹಣ-ಆಸ್ತಿ ಮುಂತಾದ ಬಾಹ್ಯ ಬಹಿರಂಗದ ಸಂಪತ್ತು ಒಂದಿಲ್ಲ ಒಂದು ದಿನ ಕಳೆಯಬಹುದು, ಹಾಳಾಗಬಹುದು. ಆದರೆ ಅಂತರಂಗದ ಜ್ಞಾನ ಸಂಪತ್ತು ಯಾರೂ ಕದಿಯದ ಶ್ರೇಷ್ಠ ಸಂಪತ್ತು. ನೆಮ್ಮದಿಯ ನಾಳೆಗೆ ಒಮ್ಮನಸ್ಸಿನಿಂದ ದುಡಿದ ಶರಣರಿಗೆ ಸಂತೃಪ್ತ ಜೀವನವೇ ಮುಖ್ಯವಾಗಿತ್ತು. ಹೆಣ್ಣು, ಹೊನ್ನು, ಮಣ್ಣಿನ ಆಸ್ತಿಗೆ ಬೆನ್ನು ಹತ್ತಿ ಬದುಕು ಹಾಳು ಮಾಡಿಕೊಳ್ಳುವುದಕ್ಕಿಂತ ಯಾರಿಂದಲೂ ಕದಿಯಲಾಗದ ಜ್ಞಾನದ ಸಂಪಾದನೆಯಿಂದ ಬದುಕು ಕಟ್ಟಿಕೊಳ್ಳಬೇಕು. ಬೆಳಕಿನ ನಾಳೆಗೆ ಶರಣರ ಈ ಮಾತುಗಳು ಲೇಸು ಎನಿಸುವಂತಿವೆ.

Contact Your\'s Advertisement; 9902492681
ಹರಿದ ಗೋಣಿಯಲ್ಲೊಬ್ಬ ಕಳವೆಯ ತುಂಬಿದ
ಇರುಳೆಲ್ಲ ನಡೆದನಾ ಸುಂಕಕಂಜಿ
ಕಳವೆಯಲ್ಲ ಹೋಗಿ
ಬರಿಗೋಣಿ ಉಳಿಯಿತ್ತು
ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮುದನೂರಿನ ಆದ್ಯ ವಚನಕಾರ ಜೇಡರ ದಾಸಿಮಯ್ಯನವರು ದುಗ್ಗಳಾದೇವಿಯೊಂದಿಗೆ ದಾಂಪತ್ಯವನ್ನು ಬಾಳಿ ಬದುಕಿದವರು. ಶರಣರು ದೇವರ ಎದುರುಗಡೆ ನಿಂತು ಅದು ಕೊಡು, ಇದು ಕೊಡು ಎಂದು ಬಿಕ್ಷೆ ಬೇಡಿದವರಲ್ಲ. ಬೇಡುವುದು ಬಿಕ್ಷೆ ಹೊರತು ಪ್ರಾರ್ಥನೆಯಲ್ಲ ಎಂದು ಅರಿತಿದ್ದರು. ಕಣ್ಣ ಮುಂದೆ, ಬೆನ್ನ ಹಿಂದೆ ನೀ ಇರು ತಂದೆ ಎಂದು ದೇವರಲ್ಲಿ ನಿವೇದಿಸಿಕೊಂಡ ಅವರು, ಪರಧನ, ಪರವಧುವಿಗೆ ನಮ್ಮ ಮನ ಎಳಸದಂತೆ ಕರುಣಿಸು ಎಂದು ಪ್ರಾರ್ಥಿಸಿದರು.

ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ, ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ ನಿಮ್ಮ ಶರಣರ ಸೂಳ್ನುಡಿಯ ಒಂದರೆಗಳಿಗೆ ಇತ್ತಡೆ ನಿಮ್ಮನಿತ್ತೆ ಎಂದು ರಾಮನಾಥನ ಮೇಲೆ ಪ್ರಮಾಣ ಮಾಡಿ ಹೇಳುವ ದಾಸಿಮಯ್ಯನವರು ಈ ನೋಟ್ ಬ್ಯಾನ್, ಜಿಎಸ್‌ಟಿ, ಟ್ಯಾಕ್ಸ್ ಕುರಿತಾಗಿ ಅಂದೇ ಪರಿಹಾರ ಕಂಡು ಹಿಡಿದಿದ್ದರು. ಅಂದಿನ ಕಾಲದಲ್ಲಿ ಒಬ್ಬ ಭವಿಯು ಹೆಚ್ಚಿನ ಹಣಕ್ಕೆ ಸುಂಕ ಕಟ್ಟದೆ ಎಲ್ಲ ಕಳ್ಳ ನಾಣ್ಯವನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಸುಂಕ ತಪ್ಪಿಸಲು ರಾತ್ರಿ ಪ್ರಯಾಣ ಮಾಡಿ ಮರುದಿನ ನೋಡಿದಾಗ ಆ ಗೋಣಿ ಚೀಲವು ಹರಿದು ಹೋಗಿತ್ತು. ಆ ಚೀಲದಲ್ಲಿನ ಕಳ್ಳ ನಾಣ್ಯವೂ ಕಳೆದು ಹೋಗಿದ್ದವು.

ಇಂತಹ ಅಳಿಮನದವನ ಭಕ್ತಿ ಜಂಗಮಕ್ಕೆ ಸಲ್ಲುವುದಿಲ್ಲ. ಕಳ್ಳ ಮನಸ್ಸು ತುಡುಗು ತಾಣವನ್ನು ಶರಣರು ಕಠೋರವಾಗಿ ವಿರೋಧಿಸಿದರು. ಜೇಡರ ದಾಸಿಮಯ್ಯನವರು ಭಕ್ತನ ಮನದಲ್ಲಿನ ಅರಿಷಡ್ವರ್ಗಗಳನ್ನು ಸಾದೃಶವಾಗಿ ಸಾಂಕೇತಿಸಿ ಚಿತ್ರಿಸಿದ್ದಾರೆ. ಕಪ್ಪು ಹಣ ಧಿಕ್ಕರಿಸಿದ ಬಸವಾದಿ ಶರಣರು, “ಭಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು, ಕಳ್ಳನಾಣ್ಯ ಸಲುಗೆಗೆ ಸಲ್ಲದು, ಕಳ್ಳ ನಾಣ್ಯ ಸಲ್ಲಲಿಯರಯ್ಯ, ಭಕ್ತಿಯೆಂಬ ಭಂಡಕ್ಕೆ ಜಂಗಮವೆ ಸುಂಕಿಗ” ಎಂದು ಹೇಳಿದ್ದಾರೆ. ಕಳ್ಳ ನಾಣ್ಯ (ಕಪ್ಪು ಹಣ) ಹಾಗೂ ಸುಂಕ (ಟ್ಯಾಕ್ಸ್) ಹೊಂದಿರುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.

ಕಪ್ಪು ಹಣವನ್ನು ವಿರೋಧಿಸಿದ ಶರಣರು ಅದಕ್ಕೆ ಸುಂಕ ಕಟ್ಟುವ ಹಾಗೆ ಮಾಡಿ ರಾಜ್ಯದ ಆದಾಯವನ್ನು ಹೆಚ್ಚಿಸಿದರು. ಸರ್ಕಾರ ಹಾಗೂ ಸಾರ್ವಜನಿಕರ ಕಣ್ಣು ತಪ್ಪಿಸಿ ಸುಲಬವಾಗಿ ಪಾರಾಗಬಹುದು. ಆದರೆ ದೇವರು ಎಂಬ ಸುಂಕಿಗನಿಂದ ಪಾರಾಗುವುದು ಅಸಾಧ್ಯ. ಬೆಕ್ಕು ಹಾಲು ಕುಡಿಯುವಾಗ ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ. ಆದರೆ ಎಲ್ಲರೂ ನೋಡಿರುವುದು ಅದಕ್ಕೆ ಗೊತ್ತಿರುವುದಿಲ್ಲ. ಹಾಗೆಯೇ ಕಪ್ಪು ಹಣ ಹೊಂದಿದವರಿಗೆ ಸರ್ಕಾರಕ್ಕೆ ತೆರಿಗೆ ಕಟ್ಟದೆ ಹಾಗೆಯೇ ಉಳಿಸಿಕೊಂಡ ತೆರಿಗೆ ಕಳ್ಳರಿಗೆ ಚಾಟಿ ಏಟು ಬೀಸಿದಂತಿದೆ ದಾಸಿಮಯ್ಯನವರ ಈ ವಚನ.

ಅದು ಕೊಡು, ಇದು ಕೊಡು ಎಂದು ದೇವರನ್ನು ಬೇಡುವ, ಕಾಡುವ ನಾವುಗಳು ಆತನಿಗೆ ತೃಪ್ತನಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ “ಹಾಲಿನದು ಹಾಲಿಗೆ ನೀರಿನದು ನೀರಿಗೆ” ಎನ್ನುವಂತಾಗುತ್ತದೆ. ಕಾಯಕದಿಂದ ಬಂದ ಹೆಚ್ಚಿನದನ್ನು ದಾಸೋಹಕ್ಕೆ ಬಳಸಬೇಕು. ಅದು ಕೇವಲ ಒಬ್ಬರ ಸ್ವತ್ತಾಗಬಾರದು. ಎಲ್ಲರ ತುತ್ತಿಗೆ ಅನ್ನವಾಗಬೇಕು. ಕೊಟ್ಟೆನೆಂಬ ಭಾವ ಕೊಡುವವರಲ್ಲಿ, ಸ್ವೀಕರಿಸಿದವನಲ್ಲಿ ಬರಬಾರದು. ಇದುವೇ ಶರಣರ ದಾಸೋಹ ಸೂತ್ರ. ಶರಣರ ಪ್ರಾಮಾಣಿಕ ಮತ್ತು ಈ ತಾತ್ವಿಕನಿಷ್ಠತೆ, ಪಾರದರ್ಶಕತೆ ಸಾರ್ವತ್ರಿಕ ಮೌಲ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here