ವಾಡಿ: ಪಟ್ಟಣದ ಪಿಲಕಮ್ಮಾ ದೇವಿ ಬಡಾವಣೆಯ ಎರಡು ವರ್ಷದ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್‍ಡೌನ್ ತೆಕ್ಕೆಗೆ ಜಾರಿದ ನಾಲ್ಕು ರೆಡ್ ಜೋನ್ ಬಡಾವಣೆಗಳ ಅತ್ಯಂತ ಬಡ ಕುಟುಂಬಗಳಿಗೆ ಅಜೀಂ ಪ್ರೇಮಜೀ ಫೌಂಡೇಷನ್ ಬೆಂಗಳೂರು ಇವರ ವತಿಯಿಂದ 10 ಕೆಜಿ ಅಕ್ಕಿ, ಗೋದಿ ಹಿಟ್ಟು 2.5 ಕೆಜಿ, ತೊಗರಿ ಬೇಳೆ 1 ಕೆಜಿ, ಎಣ್ಣೆ, ಉಪ್ಪು, ಈರುಳ್ಳಿ, ಆಲುಗಡ್ಡೆ, ಖಾರದ ಪುಡಿ, ಸಾಬೂನು, ಟೂತ್ ಪೇಸ್ಟ್ ಸೇರಿದಂತೆ ಇತರ ದಿನಸಿಯುಳ್ಳ ಒಟ್ಟು 300 ಆಹಾರ ಕಿಟ್ ವಿತರಿಸಲಾಯಿತು.
ಮಂಗಳವಾರ ಸೀಲ್‍ಡೌನ್ ಬಡಾವಣೆಗಳಿಗೆ ಭೇಟಿ ನೀಡಿದ ನಾಲವಾರ ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷೆ ಮೈನಾಬಾಯಿ ರಾಠೋಡ ಹಾಗೂ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಅವರು ಮೊದಲೇ ಗುರುತಿಸಿ ಪಟ್ಟಿ ಮಾಡಲಾಗಿದ್ದ ಪಡಿತರ ಚೀಟಿ ವಂಚಿತ ಬಡ ಕುಟುಂಬಗಳಿಗೆ ಮತ್ತು ಗುಡಿಸಲುವಾಸಿ ಬಡಜನರಿಗೆ ಅಜೀಂ ಪ್ರೇಮಜೀ ಫೌಂಡೇಷನ್ ಒದಗಿಸಿದ ಆಹಾರ ದಾಸ್ತಾನು ವಿತರಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ, ಈಡಿಗ ಸಮಾಜದ ಅಧ್ಯಕ್ಷ ಸುನೀಲ ಗುತ್ತೇದಾರ, ಈಶ್ವರ ಅಂಬೇಕರ್, ರಾಹುಲ ಹುಗ್ಗಿ, ವಿಜಯಕುಮಾರ ಮಂಗಳೂರ ಮತ್ತಿತರರು ಇದ್ದರು.