ನಿಸರ್ಗದ ನಿಯಮ ಜಗದ ನಿಯಮದ ಒಳಿತಿಗಾಗಿಯೇ ಇದ್ದು, ಜೀವ ಸಂಕುಲ ಕೂಡಿ ಬಾಳಲು ಹೇಳುತ್ತದೆ. ಆದರೆ ಬರೀ ಸ್ವಾರ್ಥವೇ ತುಂಬಿದ ಜನರ ನಿಯಮದಲ್ಲಿ ನಿಸರ್ಗದ ಒಳಿತು ಇಲ್ಲ. ಕೂಡಿ ಬಾಳುವ ಸಂದೇಶ ಇಲ್ಲ! ಈ ಕೊರೊನಾ ವೈರಾಣು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕಣ್ಣಿಗೆ ಕಾರಣದ ವೈರಾಣು ಅದೆಷ್ಟು ಜನರ ಬಲಿ ತೆಗೆದುಕೊಳ್ಳುತ್ತಿದೆ. ಈ ವಿಷಯವನ್ನು ಪ್ರತಿದಿನ ಟಿವಿ ಹಾಗೂ ಪತ್ರಿಕೆಗಳಲ್ಲಿ ನೋಡುತ್ತಿದ್ದರೆ ಮನಸ್ಸು ಭಾರವಾಗುತ್ತಿದೆ.
ಒಂದಲ್ಲ, ಎರಡಲ್ಲ, ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕರೊನಾ ರೋಗದಿಂದ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಕೋಟ್ಯಂತರ ಜನ ಸೋಂಕಿಗೆ ಒಳಗಾಗಿದ್ದಾರೆ. ಇಂತಹ ಮನ ಕಲಕುವ ದೃಶ್ಯವನ್ನು ನೋಡುತ್ತಿದ್ದರೆ ಎದೆ ಢವ-ಢವ ಎನ್ನುತ್ತದೆ. ಕರೊನಾ ಜನರ ಬದುಕಿನಲ್ಲಿ ಭಯ, ತಲ್ಲಣ ಉಂಟು ಮಾಡಿದೆ. ಭಾರತೀಯರನೇಕರು ತಮ್ಮ ಮಕ್ಕಳಿಗೆ ಉನ್ನತ ಶೀಕ್ಷಣ ನೀಡಿ ಒಳ್ಳೆಯ ಸಂಬಳ ಹಾಗೂ ಉದ್ಯೋಗಕ್ಕಾಗಿ ವಿದೇಶಗಳಿಗೆ ಕಳಿಸಿದ್ದಾರೆ. ಆ ದೇಶದಲ್ಲಿ ಇಷ್ಟು ಪಾಸಿಟಿವ್, ಈ ದೇಶದಲ್ಲಿ ಇಷ್ಟು ಸಾವು ಎಂಬ ಸುದ್ದಿಯು ಅವರ ನಿದ್ದೆಗೆಡಿಸಿದೆ.
ಹಗಲು ರಾತ್ರಿ ಭಯದಲ್ಲೇ ಕಾಲ ಕಳೆಯುವಂತಾಗಿದೆ. ದೂರದ ದೇಶದಲ್ಲಿರುವ ಮಕ್ಕಳ ಸಲುವಾಗಿ ಇಲ್ಲಿರುವ ತಂದೆ-ತಾಯಿಗಳು ಚಿಂತಿಸುವಂತೆ ಮಾಡಿದೆ. ಮಕ್ಕಳ ಮುಖ ನೋಡುವುದು ಯಾವಾಗ? ನಾವೆಲ್ಲರೂ ಸೇರಿ ಮತ್ತೆ ನಿರಾಳ ಜೀವನ ಯಾವಾಗ ನಡೆಸುತ್ತೇವೆ ಎಂಬ ಆತಂಕ ಉಂಟಾಗುತ್ತಿದೆ.
ನಿಸರ್ಗದ ನಿಯಮ ಮೀರಿ ಮನಬಂದಂತೆ ವರ್ತಿಸುತ್ತಿರೆಉವುದರ ಪರಿಣಾಮವೇ ಈ ಕರೊನಾ ಎಂದರೆ ಬಹುಶಃ ತಪ್ಪಾಗಲಾರದು. ಎಲ್ಲವೂ ನನ್ನದಾಗಬೇಕು ಎಂಬ ಮಾನವನ ದುರಾಸೆಯೇ ಈ ರೋಗ ಬಂದಿದ್ದು, ಇದೊಂದು ಎಚ್ಚರಿಕೆಯ ಕರೆಗಂಟೆ ಎಂದು ಹೇಳಬಹುದಾಗಿದೆ.
ಮನುಷ್ಯ-ಮನುಷ್ಯರ ನಡುವಿನ ದ್ವೇಷಾಸೂಹೆಗಳು ಹೇಗಾದರೂ ಇದ್ದಿರಲಿ ನಿಸರ್ಗದೊಡನೆಯೂ ವೈರತ್ವ ಕಟ್ಟಿಕೊಂಡರೆ ನಮಗೆ ಉಳಿಗಾಲವಿಲ್ಲ. ಕೊರೊನಾ ಮಾನವನಿಗೆ ತನ್ನ ಅಸ್ತಿತ್ವದ ಅರಿವು ಮೂಡಿಸಿದೆ. ಮಾನವನ ಅಹಂಕಾರ, ಅಂಧಕಾರ ಅಳಿಯಲು ಕೊರೊನಾ ಎಂಬ ಈ ಚಿಕ್ಕ ವೂರಾಣು ಸೃಷ್ಟಿಯಾಗಿರಬಹುದು ಎಂದೆನಿಸುತ್ತಿದೆ. ಏನೆಂಥದಕ್ಕೂ ಹೆದರದ, ಹೇಸದ ಮನುಷ್ಯ ಇಂದು ಈ ಕೊರೊನಾಕ್ಕೆ ಹೆದರಿ ಮನೆಯಲ್ಲಿ ಕೂರುವಂತಾಗಿದೆ. ಆದರೆ ಇದೇವೇಳೆಗೆ ಮನುಷ್ಯ ತನ್ನ ಕುಟುಂಬದವರ ಜೊತೆ ಪ್ರೀತಿ, ವಿಶ್ವಾಸ, ಸಂತೋಷದಿಂದ ಬಾಳಿ ಬದುಕುವ ಪಾಠ ಕೂಡ ಕಲಿಸಿದೆ. ನಾಳೆಯ ಜೀವನಕ್ಕೆಂದು ಸಂಗ್ರಹಿಸಿಡುವುದಕ್ಕಿಂತ ಇಂದಿನ ಪ್ರಾಣ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ದುರಾಸೆ, ದುರ್ಬುದ್ಧಿಯಿಂದ ಕೇಡು ಕಟ್ಟಿಟ್ಟ ಬುತ್ತಿ ಎಂಬುದನ್ನು ಕೊರೊನಾ ಕಲಿಸಿದೆ. ಮನುಷ್ಯ ಪ್ರಾಣಿಯೊಂದನ್ನು ಬಿಟ್ಟರೆ ಉಳಿದ ಯಾವ ಪ್ರಾಣಿಗಳಿಗೂ ಈ ದುರಾಸೆ, ದುರ್ಬುದ್ಧಿ ಇಲ್ಲ ಎಂದೆನಿಸುತ್ತದೆ.
ವಿಶ್ವದ ಎಲ್ಲ ಮಾನವರು ಒಂದೇ ತಾಯಿಯ ಮಕ್ಕಳು. ಎಲ್ಲರೂ ಸಮಾನರು ಎಂಬುದನ್ನು ಅರಿತು ಮಾನವೀಯತೆ, ದಯೆ, ಪ್ರೀತಿ, ಶಾಂತಿ, ನೆಮ್ಮದಿಯಿಂದ ಬದುಕಬೇಕು ಎಂಬ ಬಸವಾದಿ ಶರಣರ ಆಶಯಗಳನ್ನು ಮತ್ತೆ ನೆನಪಿಸುವ ಕಾಲವಿದು. ಆದರೆ ಇದು ನಮ್ಮಲ್ಲಿ ಎಷ್ಟು ದಿನ ಇರುತ್ತದೆ? ಎಂಬುದರ ಬಗ್ಗೆ ಚಿಂತನೆ ನಡೆಯಬೇಕಿದೆ.
ಕೊರೊನಾ ಎಂಬ ಚಿಕ್ಕ ವೈರಾಣು ಮಹಾಮಾರಿಯಾಗಿ ನಮಗೆ ಪಾಠ ಕಲಿಸಿರಬೇಕಾದರೆ, ಶರಣರ ಸುಳ್ನೂಡಿಗಳು ಇನ್ನೆಂಥ ಪಾಠ ಕಲಿಸಲಿಕ್ಕಿಲ್ಲ. ಹೀಗಾಗಿ ನಾವೆಲ್ಲರೂ ಶರಣರ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಮುನ್ನಡೆಯೋಣ.