ಕಲಬುರಗಿ: ಕೊರೊನಾ ಹಿನ್ನೆಲೆˌಶಾಸಕ ಪ್ರಿಯಾಂಕ್ ಖರ್ಗೆ ಅವರಿಂದ ಭಾರಿ ನೆರವು

0
299

ಕಲಬುರಗಿ: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಜಿಲ್ಲೆ ಕೊರೊನಾ ಹಾಟ್‌ಸ್ಪಾಟ್‌ ಆಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 16 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂವರು ಸಾವಿಗೀಡಾಗಿದ್ದಾರೆ.

ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯನ್ನು ತಹಬದಿಗೆ ತರಲು ಕೊರೋನಾ ವಾರಿಯರ್ಸ್‌ಗಳು ನಮಗಾಗಿ ಹಾಗೂ ನಮ್ಮವರಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಇಂತಹ ಸಮಯದಲ್ಲಿ ಅವರಿಗೆ ರಕ್ಷಣಾ ಸಾಮಾಗ್ರಿಗಳ ಅಗತ್ಯತೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಇದುವರೆಗೂ ವೈಯಕ್ತಿಕವಾಗಿ ಭಾರಿ ಮೊತ್ತದ ಹಣ ಹಾಗೂ ಸಾಮಾಗ್ರಿಗಳನ್ನು ನೀಡಿದ್ದಾರೆ.

Contact Your\'s Advertisement; 9902492681

1,700 ಹ್ಯಾಂಡ್ ಸ್ಯಾನಿಟೈಸರ್, 14,400 : ಹ್ಯಾಂಡ್ ಗ್ಲೌವ್ಸ್, 1000 N95 ಮಾಸ್ಕ್‌ಗಳನ್ನು ಒಳಗೊಂಡಂತೆ, ಒಟ್ಟು 23,500 ಮಾಸ್ಕ್, 200 ಪಿಪಿಇ ಕಿಟ್‌, 150 ಕ್ಯಾನ್ ನೆಲ ಸ್ವಚ್ಛಗೊಳಿಸುವ ಕೆಮಿಕಲ್‌ ಅನ್ನು ಜಿಲ್ಲಾಡಳಿತಕ್ಕೆ ತಲುಪಿಸಿದ್ದಾರೆ. ಇದರೊಟ್ಟಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ತಿಂಗಳ ಸಂಬಳ ಹಾಗೂ ಕೆಪಿಸಿಸಿ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವೆಂದರೆ, ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನೇಕ ಜನ ದಿನಗೂಲಿ ನೌಕರರು, ಅಸಂಘಟಿತ ವಲಯದ ಕಾರ್ಮಿಕರು ದುಡಿಮೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವವರಿಗೆ ಉಳ್ಳವರು ಸಹಾಯ ಮಾಡುವಂತೆಯೂ ಅವರು ಕೋರಿದ್ದಾರೆ.

ಬೆಂಗಳೂರು ಹಾಗೂ ಪರರಾಜ್ಯಗಳಲ್ಲಿ ಸಿಲುಕಿದ್ದ ಕಲಬುರಗಿ ಮೂಲದ 2000ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ 2 ತಿಂಗಳಿಗಾಗುವಷ್ಚು ಪಡಿತರವನ್ನು ನೀಡಿದ್ದಾರೆ.

ಲಾಕ್‌ಡೌನ್ ಪರಿಣಾಮವಾಗಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಎಚ್‌ಐವಿ, ಪಿತ್ತಜನಕಾಂಗದ ಕಾಯಿಲೆ ಮತ್ತು ಕಾರ್ಡಿಯಾಕ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿಗಳನ್ನು ಪಡೆಯುವುದು ತುಂಬಾ ಕಷ್ಟಕರವಾಗಿತ್ತು. ಬೆಂಗಳೂರು ಮತ್ತು ಹೈದರಾಬಾದ್ ವಿತರಕರಿಂದ ಔಷಧಿಗಳನ್ನು ತರೆಸಿಕೊಂಡು ಅಗತ್ಯವಿರುವವರಿಗೆ ವಿತರಿಸಿದ್ದಾರೆ.

ಅಲ್ಲದೆ ಜಿಲ್ಲೆಯಲ್ಲಿ ಅನೇಕ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಬಡವರು ಹಾಗೂ ದಿನಗೂಲಿ ಕಾರ್ಮಿಕರಿಗೆ ಆಸರೆಯಾಗಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಚಿಸಿದ್ದಾರೆ.

ನಮ್ಮ ರಕ್ಷಣೆಗಾಗಿ ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ನಮ್ಮ ಸಂಪೂರ್ಣ ಸಹಕಾರದ ಅವಶ್ಯಕತೆ ಇದೆ. ಇಂತಹ ಸಮಯದಲ್ಲಿ ನಮ್ಮ ಸುರಕ್ಷತೆಗಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಖಂಡನೀಯ.
ಇಂತಹ ಘಟನೆಗಳು ಇಡೀ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡುತ್ತವೆ. ಈ ರೀತಿಯ ಘಟನೆಗಳು ಇನ್ನೊಮ್ಮೆ ಮರುಕಳಿಸಬಾರದು.

ದಯವಿಟ್ಟು ಎಲ್ಲರೂ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಿ. ಲಾಕ್‌ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ.
ನಮ್ಮ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಪೊಲೀಸರು, ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here