ಕೃಷಿ ಚಟುವಟಿಕೆಗಳಿಗೆ ಸಮಸ್ಯೆ ಇಲ್ಲ, ಲಾಕ್‌ಡೌನ್ ಉಲ್ಲಂಘಿಸಿದರೆ ಕಾನೂನು ಕ್ರಮ: ಮಾರ್ಬನ್ಯಾಂಗ್ ಎಚ್ಚರಿಕೆ

0
33

ಕಲಬುರಗಿ: ಮಹಾಮಾರಿ ಕೊರೋನಾ ವಿರುದ್ಧ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾರೂ ಸಹ ಲಾಕ್‌ಡೌನ್ ಉಲ್ಲಂಘಿಸಬಾರದು. ಒಂದು ವೇಳೆ ಉಲ್ಲಂಘಿಸಿದ್ದೇ ಆದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಇಲ್ಲಿ ಎಚ್ಚರಿಸಿದರು.

ಶನಿವಾರ ಪೋಲಿಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಚಟುವಟಿಕೆ ಕಾರ್ಯಗಳಿಗಾಗಿ ಯಾವುದೇ ರೀತಿಯ ಅಡೆತಡೆ ಇಲ್ಲ ಎಂದರು.

Contact Your\'s Advertisement; 9902492681

ಈಗಾಗಲೇ ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ, ಕೂಲಿಕಾರರಿಗೆ ಕೆಲವು ವಿನಾಯಿತಿಗಳನ್ನು ಘೋಷಿಸಲಾಗಿದೆ. ಬೇರೆ ರಾಜ್ಯದ ಕೃಷಿ ಕೂಲಿ ಕಾರ್ಮಿಕರು ಜಿಲ್ಲೆಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ. ಜೇವರ್ಗಿ ತಾಲ್ಲೂಕಿನಲ್ಲಿ ೫೬ ಜನ ಇದ್ದು, ಅಂತಹ ಬೇರೆ ರಾಜ್ಯದ ಕೂಲಿ ಕಾರ್ಮಿಕರನ್ನು ಅವರ ಸ್ವಸ್ಥಳಕ್ಕೆ ಕಳಿಸುವ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಲಾಕ್‌ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಹಾಗೂ ಮುಖಗವಚಗಳನ್ನು ಹಾಕಿಕೊಳ್ಳುವುದು ಮುಂತಾದವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಘಟನೆಗಳು ಸಂಭವಿಸಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈಗಾಗಲೇ ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿ ರಥೋತ್ಸವ ಜರುಗಿದ ಕುರಿತು ಪ್ರಕರಣಗಳು ವರದಿಯಾಗಿವೆ. ಅಂಥವರ ವಿರುದ್ಧ ರೌಡಿಶೀಟ್ ಹಾಕಲಾಗಿದೆ. ಇದು ಕೇವಲ ಲಾಕ್‌ಡೌನ್ ಪಾಲಿಸುವ ಉದ್ದೇಶದಿಂದ ಮಾತ್ರ ಮಾಡಲಾಗಿದೆ ಎಂದು ಅವರು ಹೇಳಿದರು.

ಕೊರೋನಾ ನಿಯಂತ್ರಣಕ್ಕಾಗಿ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿತರ ಹಾಗೂ ಸಂಪರ್ಕಿತರು ಕ್ವಾರಂಟೈನ್‌ನಲ್ಲಿ ಇದ್ದು, ಅವರ ಕುರಿತು ಪೋಲಿಸರು ಹೆಚ್ಚು ನಿಗಾ ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ೩೩೫ ರಸಗೊಬ್ಬರ, ೩೧೭ ಬಿತ್ತನೆ ಬೀಜ, ೩೧೯ ಕೀಟನಾಶಕ ಮಾರಾಟಗಾರರಿದ್ದು, ಜಿಲ್ಲೆಯಾದ್ಯಂತ ಕೃಷಿ ಪರಿಕರ ಮಾರಾಟ ಕೇಂದ್ರ ತೆರೆಯಲು ೮೭ ಗ್ರೀನ್ ಪಾಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೨೮ ಕೃಷಿ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಅಗತ್ಯ ಇರುವ ಭೂಮಿ ಸಿದ್ಧತಾ ಉಪಕರಣಗಳನ್ನು, ಕಟಾವು ಯಂತ್ರಗಳನ್ನು ಬೇಡಿಕೆಗೆ ಅನುಗುಣವಾಗಿ ಬಾಡಿಗೆ ಆಧಾರದಲ್ಲಿ ಪೂರೈಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಮುಕ್ತ ಅವಕಾಶ ಕಲ್ಪಿಸಲು ಅಗ್ರಿವಾರ್ ರೂಮ್ ಸ್ಥಾಪಿಸಲಾಗಿದೆ. ರೈತರು ದೂರವಾಣಿ ಸಂಖ್ಯೆ ೦೮೪೭೨- ೨೭೮೬೨೮ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಜಿಲ್ಲೆಯಲ್ಲಿ ೩೨ ರೈತ ಸಂಪರ್ಕ ಕೇಂದ್ರಗಳಿದ್ದು, ರೈತರುಗಳ ಉತ್ಪನ್ನಗಳ, ಕೃಷಿ ಯಂತ್ರೋಪಕರಣಗಳ ಸಾಗಾಣಿಕೆ, ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಎಲ್ಲ ಸೂಕ್ತ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.

ಕೃಷಿ ಇಲಾಖೆಯ ಎಲ್ಲ ಕಾರ್ಯನಿರತ ಸಿಬ್ಬಂದಿಗಳಿಗೆ ಕೋವಿಡ್-೧೯ ಮುಂಜಾಗ್ರತಾ ಕಿಟ್ ನೀಡಲಾಗಿದೆ. ಗ್ರೀನ್ ಪಾಸ್ ವಿತರಿಸಿದ ಜಿಲ್ಲೆಯ ಕೃಷಿ ಪರಿಕರ ಮಾರಾಟಗಾರರಿಗೆ ಕೋವಿಡ್-೧೯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here