ಸುರಪುರ: ದೇಶದಲ್ಲಿ ಕೊರೊನಾ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ನೂರಾರು ಸಾಂಪ್ರಾದಾಯಿಕ ವೃತ್ತಿಯ ಕಸಬುದಾರರ ಬದುಕು ಸಂಕಷ್ಟಕ್ಕೆ ಸಿಕ್ಕು ಬೀದಿಗೆ ಬಂದಿದ್ದು ಅಂತಹ ಸಂಕಷ್ಟಕ್ಕೆ ಸಿಕ್ಕು ನಲಗುತ್ತಿರುವ ಚಮ್ಮಾರಿಕೆ ವೃತ್ತಿಯ ಕುಟುಂಬಗಳು ಒಂದಾಗಿವೆ.
ನಗರದಲ್ಲಿ ಅನೇಕ ವರ್ಷಗಳಿಂದ ಚಮ್ಮಾರಿಕೆ ವೃತ್ತಿ ಮಾಡಿಕೊಂಡು ಬರುತ್ತಿರುವ ಕುಟುಂಬಗಳು ಇಂದು ಕೆಲಸವಿಲ್ಲದೆ ತೀವ್ರ ಸಂಕಷ್ಟ ಪಡುವಂತಾಗಿದೆ.ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಜನರು ಮನೆಯಿಂದ ಹೊರ ಬರದೆ ಚಮ್ಮಾರಿಕೆ ಮಾಡಲು ಕೆಲಸವಿಲ್ಲದೆ ಜನರು ಬರುವುದನ್ನು ಎದರು ನೋಡುವಂತಾಗಿದೆ.
ಇಂದು ಚಮ್ಮಾರಿಕೆ ಕೆಲಸ ಮಾಡುವ ನಮ್ಮ ಸಮುದಾಯದ ಎಲ್ಲಾ ಕುಟುಂಬಗಳು ತುಂಬಾ ತೊಂದರೆಯಲ್ಲಿವೆ ಆದ್ದರಿಂದ ಸರಕಾರ ಚಮ್ಮಾರಿಕೆ ಮಾಡುವ ಕುಟುಂಬಗಳಿಗೆ ತಿಂಗಳಿಗೆ ಹತ್ತು ಸಾವಿರ ಪಿಂಚಣಿ ಹಾಗು ಚಮ್ಮಾರಿಕೆ ಮಾಡಲು ಬೇಕಾಗುವ ಸಾಮಗ್ರಿಗಳ ಕಿಟ್ ನೀಡುವ ಮೂಲಕ ನೆರವಾಗಬೇಕಿದೆ. -ಬಸವರಾಜ ಮುಷ್ಠಳ್ಳಿ ಮಾದಿಗ ಯುವ ಸೇನೆ ಹೋರಾಟಗಾರ
ಇದರ ಕುರಿತು ಚಮ್ಮಾರಿಕೆ ಕೆಲಸದ ಅಂಬ್ಲಯ್ಯ ಮಾತನಾಡಿ,ಇಂದು ನಮ್ಮ ಚಮ್ಮಾರಿಕೆ ಕೆಲಸ ಮಾಡುವ ಕುಟುಂಬಗಳ ಸಂಕಷ್ಟ ಹೇಳತೀರದಾಗಿದೆ.ಈ ಮುಂಚೆ ದಿನಾಲು ೨ ರಿಂದ ೩ ನೂರು ರೂಪಾಯಿ ದುಡಿಯುತ್ತಿದ್ದೆವು, ಆದರೆ ಇಂದು ಲಾಕ್‌ಡೌನ್ ಘೋಷಣೆಯಾದಾಗಿನಿಂದ ನಿತ್ಯವು ಬೆಳಿಗ್ಗೆ ಬಂದು ಕುಳಿತರೆ ಸಂಜೆವರೆಗು ಐವತ್ತು ರೂಪಾಯಿಕೂಡ ದುಡಿಯುತ್ತಿಲ್ಲ.ಇದರಿಂದ ನಮ್ಮ ಸಂಸಾರ ನಡೆಸುವುದು ತುಂಬಾ ಕಷ್ಟವಾಗಿದೆ.ಯಾರಾದರೂ ಸಂಘ ಸಂಸ್ಥೆಗಳವರು ಬಂದು ನಮಗೆ ಅನ್ನ ನೀಡಿದರೆ ಉಟ ಇಲ್ಲದಿದ್ದರೆ ನೀರು ಕುಡಿದು ಕೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರಕಾರ ಉಚಿತ ಪಡಿತರ ನೀಡುತ್ತಿದೆ ಆದರೆ ಕೇವಲ ಅಕ್ಕಿ ನೀಡಿದಾಕ್ಷಣೆ ಮನೆಯ ಎಲ್ಲರಿಗೂ ಆಹಾರ ಸಿಕ್ಕಂತಾಗುವುದಿಲ್ಲ.ಬರೀ ಅಕ್ಕಿಯಿಂದ ಏನು ಮಾಡುವುದು ಇನ್ನುಳಿದ ಯಾವ ಪದಾರ್ಥವು ತರಲು ನಮ್ಮಲ್ಲಿ ಹಣವಿಲ್ಲ,ಬೇಳೆ ಸಕ್ಕರೆ ಜೋಳ ಹೀಗೆ ಎಲ್ಲಾ ಅಗತ್ಯ ವಸ್ತುಗಳಿಗೂ ತುಂಬಾ ತೊಂದರೆ ಪಡುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.