ಸುರಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಗೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಕಕ್ಕೇರಾ ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.
ಶರಣಪ್ಪ ಯಾಳಗಿ ಮತ್ತು ತಿಪ್ಪಣ್ಣ ಯಾಳಗಿ ಎಂಬುವವರ ಮನೆಗೆ ಬೆಂಕಿ ಬಿದ್ದು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿಗಳ ಅಕ್ಕಿ ಸಕ್ಕರೆ ಕಡ್ಲೆ ಹಿಟ್ಟು ಅಡುಗೆ ಎಣ್ಣೆ ಸೇರಿದಂತೆ ಅನೇಕ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಬೆಂಕಿ ಹೊತ್ತಿ ಉರಿಯುತ್ತಿದ್ದದನ್ಪು ನೋಡಿದ ನೂರಾರು ಜನರು ಹಾಗೂ ಸ್ಥಳೀಯ ಪೊಲೀಸರ ಸಮಯಪ್ರಜ್ಞೆಯಿಂದ ಮನೆಮನೆಗಳಿಂದ ನೀರು ತಂದು ಸುರಿದು ಬೆಂಕಿಯನ್ನು ನಂದಿಸಲು ಶ್ರಮವಹಿಸಿದರು.
ಮನೆಯಲ್ಲಿ ಅಡುಗೆ ಗ್ಯಾಸ್ ಬೆಂಕಿಯಲ್ಲಿ ಸುಡುತ್ತಿದ್ದುದನ್ನು ನೋಡಿ ಹೊರಗೆಳೆದು ತಂದಿದ್ದರಿಂಜ ಮುಂದಾಗಬಹುದಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದರು.
ಮದುವೆ ಸಮಾರಂಭದಲ್ಲಿ ಅಡುಗೆ ತಯಾರಿಸಲು ತಂದಿದ್ದ ಎಲ್ಲಾ ವಸ್ತು ಸುಟ್ಟು ಹೋಗಿದ್ದರಿಂದ ಸಾಲ ಮಾಡಿ ತಂದ ವಸ್ತುವಿನ ನಷ್ಟಕ್ಕಾಗಿ ಶರಣಪ್ಪ ಯಾಳಗಿ ತಮ್ಮ ನೋವು ತೋಡಿಕೊಂಡರು.
ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಪೊಲೀಸರನ್ನು ಹೊರತು ಪಡಿಸಿ ಕಂದಾಯ ಇಲಾಖೆ ಅಧಿಕಾರಿಗಳು ಬರಲಾಗಿಲ್ಲ.