ಶಹಾಬಾದ: ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಂಗಳವಾರ ಎಐಡಿಎಸ್‍ಓ ಸಮಿತಿಯಿಂದ ಮೇ 26 ಅಖಿಲ ಕರ್ನಾಟಕ ಆಗ್ರಹ ದಿನದ ಅಂಗವಾಗಿ ಉಪತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಸ್ತುತ ಯಾರೊಬ್ಬರು ಊಹಿಸಲಾಗದ ಪರಿಸ್ಥಿತಿಗೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಕೊರೋನದ ಭೀಕರತೆ ಹೆಚ್ಚುತ್ತಿದ್ದು, ಸಾವಿನ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಲೇ ಇರುವುದು ಒಂದಡೆಯಾದರೆ, ಅನಿರೀಕ್ಷಿತ ಲಾಕ್ ಡೌನ್ ದೇಶದ ಜನರ ಅದರಲ್ಲೂ ಅತ್ಯಂತ ಕೆಳವರ್ಗದ ಜನರ ಬದುಕನ್ನು ಛಿದ್ರಗೊಳಿಸಿದೆ. ದುಡಿಮೆಯಿಲ್ಲದೇ, ಜೀವನದ ಭದ್ರತೆಯಿಲ್ಲದೆ ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ, ಶಾಲಾ ಕಾಲೇಜುಗಳ ಶುಲ್ಕ, ಸಾರಿಗೆ ವ್ಯವಸ್ಥೆ, ಹಾಸ್ಟೆಲ್‍ಗಳ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅನೇಕ ಶೈಕ್ಷಣಿಕ ಸಮಸ್ಯೆಗಳು ಎದುರಾಗುತ್ತಿವೆ.
ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ-ಕಾಲೇಜುಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು.ವಿಶ್ವ ವಿದ್ಯಾಲಯಗಳ ಪರೀಕ್ಷಾ ಶುಲ್ಕಗಳನ್ನು ರದ್ದು ಪಡಿಸಬೇಕು. ಈಗಾಗಲೇ ಶುಲ್ಕ ಪಡೆದಲ್ಲಿ ಅದನ್ನು ವಾಪಾಸ್ಸು ಮಾಡಬೇಕು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು (ಸ್ಕಾಲರ್ಶಿಪ್) ಹೆಚ್ಚಿಸಿ ಕಡ್ಡಾಯವಾಗಿ ನೀಡಬೇಕು. ಸರ್ಕಾರಿ ಹಾಸ್ಟೆಲ್‍ಗಳ ಆನುದಾನವನ್ನು ಹೆಚ್ಚಿಸಿ ಹಾಗೂ ಹಾಸ್ಟೆಲ್ ಸೌಕರ್ಯವನ್ನು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲೇ ಓದಗಿಸಿ. ಆನ್‍ಲೈನ್ ತರಗತಿಗಳ ಆಧಾರದ ಮೇಲೆ ಪರೀಕ್ಷೆ ನಡೆಸಬಾರದು.
ಪರೀಕ್ಷೆಯ ರೂಪುರೇಷೆಯನ್ನು ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪ್ರಜಾತಾಂತ್ರಿಕವಾಗಿ ರೂಪಿಸತಕ್ಕದ್ದು ಎಂದು ಒತ್ತಾಯಿಸಿ ಉಪ ತಹಸೀಲ್ದಾರರ ಮೂಲಕ ಮಾನ್ಯ ಮುಖ್ಯ ಮಂತ್ರಿಗಳು, ಮಾನ್ಯ ಉನ್ನತ ಶಿಕ್ಷಣ ಸಚಿವರು, ಹಾಗೂ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಎಐಡಿಎಸ್‍ಓ ಶಹಬಾದ ಅಧ್ಯಕ್ಷ ತುಳಜರಾಮ.ಎನ್.ಕೆ, ಉಪಾಧ್ಯಕ್ಷ ರಮೇಶ ದೇವಕರ್,ಕಾರ್ಯದರ್ಶಿ ರಘು.ಜಿ.ಮಾನೆ, ಸಹ ಕಾರ್ಯದರ್ಶಿ ತೆಜಸ್.ಆರ್.ಐ,ಕಿರಣ.ಜಿ.ಮಾನೆ ಇತರರು ಇದ್ದರು.