ಕಲಬುರಗಿ: ತೋಟಗಾರಿಕೆ ಇಲಾಖೆಯಿಂದ 2019-20ನೇ ಸಾಲಿನ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಗರಿಷ್ಠ 5 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ (ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ) ಯಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ರೋಗ ಮತ್ತು ಕೀಟ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಪ್ಯಾಕ್ ಹೌಸ್, ಜೇನು ಕೃಷಿ, ಸಂರಕ್ಷಿತ ಬೇಸಾಯ ಹಾಗೂ ಸಂಸ್ಕರಣ ಘಟಕ ಹಾಗೂ ಶೈತ್ಯಾಗಾರ ಮತ್ತು ಹಣ್ಣು ಮಾಗಿಸುವ ಘಟಕಗಳಿಗೆ ಸಹಾಯಧನ ನೀಡಲಾಗುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳ ನಿಖರ ಬೇಸಾಯ, ಕೊಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್ಹೌಸ್ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡಲಾಗುವುದು. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಗುಚ್ಛ ಮಾದರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರದೇಶ ವಿಸ್ತರಣೆ, ಪ್ಯಾಕ್ಹೌಸ್ ನಿರ್ಮಾಣ, ಕೈಗೊಳ್ಳಲು ಪ್ರೋತ್ಸಾಹಧನ ನೀಡಲಾಗುತ್ತಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೆಂಗು, ಮಾವು, ಸಪೋಟ, ಬಾಳೆ, ನುಗ್ಗೆ, ಪಪ್ಪಾಯ, ಸೀಬೆ, ಕರಿಬೇವು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು ತೆಂಗು ಹಾಗೂ ಮಾವು ಪುನಶ್ಚೇತನ, ಕೊಳವೆ ಬಾವಿ ಮರು ಪೂರಣ, ಕಾಮಗಾರಿಗಳ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳನ್ನು ರೈತರ ಜಮೀನಿನಲ್ಲಿ ಅನುಷ್ಠಾನಗೊಳಿಸಲಾಗುವುದು.
ನೀರಿನ ಟ್ಯಾಂಕರ್ ಖರೀದಿಗೆ ಸಹಾಯಧನದಡಿ ತೋಟಗಾರಿಕೆ ಬೆಳೆಗಳಿಗೆ ಮಳೆಯಾಶ್ರಿತ ಖುಷ್ಕಿ ಕೃಷಿಗೆ ನೀರು ಸರಬರಾಜಿಗೆ ಟ್ಯಾಂಕರ್ ಖರೀದಿಗೆ ಸಹಾಯಧನ ನೀಡಲಾಗುವುದು. ಮಧುವನ ಮತ್ತು ಜೇನು ಸಾಕಣೆ ಯೋಜನೆಯಡಿ ಜೇನು ಪೆಟ್ಟಿಗೆ ಖರೀದಿಗಾಗಿ ಆಸಕ್ತ ರೈತರಿಗೆ ಸಹಾಯಧನ ಒದಗಿಸಲಾಗುತ್ತಿದೆ. ಆಸಕ್ತ ರೈತರು ಸಂಬಂಧಪಟ್ಟ ಆಯಾ ತಾಲೂಕಿನ ತೋಟಗಾರಿಕೆ ಕಚೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು2019ರ ಮೇ 22 ರಿಂದ ಸಂಪರ್ಕಿಸಿ ಜೂನ್ 10 ರೊಳಗಾಗಿ ಅರ್ಜಿ ಸಲ್ಲಿಸಬೇಕು. ರೈತರು ಈ ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.