ಸುರಪುರ: ತಾಲೂಕಿನ ಅನೇಕ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ.ಇದಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತ ಹಾಗು ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಎಚ್ಚರಿಸಿದರು.
ನಗರದ ಪೊಲೀಸ್ ಠಾಣೆ ಮುಂದೆ ಸಾಂಕೇತಿಕ ಮೌನ ಪ್ರತಿಭಟನೆ ನಡೆಸಿ ಮಾತನಾಡಿ,ದಲಿತರ ಮೇಲಿನ ಹಲ್ಲೆಯನ್ನು ಕುರಿತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜೂನ್ ೦೯ ರಂದು ಮಹಾತ್ಮ ಗೌತಮ್ ಬುದ್ಧ ವೃತ್ತದಲ್ಲಿ ಅಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಿಳಿಸಲಾಗಿತ್ತು.ಆದರೆ ರಾಜ್ಯದಲ್ಲಿ ಕೋವಿಡ್-೧೯ ಲಾಕ್‌ಡೌನ್ ಇರುವುದರಿಂದ ಕಾನೂನು ಉಲ್ಲಂಘನೆ ಆಗಬಾರದೆಂದು ಮತ್ತು ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಂ.ಪಾಟೀಲ ಅವರು ನಮ್ಮೆಲ್ಲ ಬೇಡಿಕೆಗಳನ್ನು ಕೆಲ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದರಿಂದ ಇಂದು ಪೊಲೀಸ್ ಠಾಣೆಗೆ ಬಂದು ಮನವಿ ಮಾಡುತ್ತಿದ್ದೇವೆ.ಜೂನ್ ೩೧ಕ್ಕೆ ಲಾಕ್‌ಡೌನ್ ಮುಗಿಯಲಿದೆ,ಇದರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು,ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾ ಪೊಲೀಸ್ ವರಿಷ್ಠರಿಗೆ ಬರೆದ ಮನವಿಯನ್ನು ಪಿಐ ಎಸ್.ಎಂ.ಪಾಟೀಲ್ ಅವರ ಮೂಲಕ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪಿಐ ಎಸ್.ಎಮ್.ಪಾಟೀಲ್ ಅವರು ಮಾತನಾಡಿ,ನಿಮ್ಮ ಈ ಬೇಡಿಕೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಿಗಿ,ಜಿಲ್ಲಾ ಸಂಘಟನಾ ಸಂಚಾಲಕ ಅಜೀಜ್ ಈಕೂರ,ಮರಲಿಂಗಪ್ಪ ನಾಟೆಕಾರ್,ರಮೇಶ ಹುಂಡೆಕಲ್,ಮಾನಪ್ಪ ಬಿಜಾಸ್ಪೂರ,ಬಸವರಾಜ ಶೆಳ್ಳಿಗಿ,ಮಹೇಶ ಸುಂಗಲಕರ್,ಜೆಟ್ಟೆಪ್ಪ ನಾಗರಾಳ,ಮಹುಮೂದಸಾಬ್ ಇತರರಿದ್ದರು.