ವಾಡಿ: ಸರಕಾರಿ ಕ್ವಾರಂಟೈನ್ ಅವದಿ ಪೂರ್ಣಗೊಳಿಸಿದ ಬಳಿಕ ಹೋಂ ಕ್ವಾರಂಟೈನ್‌ನಲ್ಲಿರಬೇಕಾದ ಮಹಾರಾಷ್ಟ್ರ ವಲಸಿಗ ಸೋಂಕಿತ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಪತ್ತೆಯಾಗುವ ಮೂಲಕ ಆಶ್ಚರ್ಯ ಮೂಡಿಸಿದ್ದಾಳೆ.
ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ವಲಸಿಗ ಮಹಿಳೆ ೧೪ ದಿನಗಳ ಸರಕಾರಿ ಕ್ವಾರಂಟೈನ್ ಮುಗಿಸಿ ಮನೆಗೆ ಬಂದಿದ್ದಾಳೆ. ಮನೆಗೆ ಬಂದು ಐದಾರು ದಿನಗಳ ನಂತರ ಕೊರೊನಾ ಸೋಂಕು ದೃಢಪಟ್ಟ ವರದಿ ಬಂದಿದೆ. ಈ ಸಂಬಂದ ಸೋಂಕಿತ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮಂಗಳವಾರ ಮನೆಗೆ ಆಗಮಿಸಿದ ೧೦೮ ವಾಹನ ಸಿಬ್ಬಂದಿಗೆ ಆಶ್ಚರ್ಯ ಕಾದಿತ್ತು.
ಮಹಿಳೆ ಮನೆಯಲ್ಲಿರದೆ ಚಿಕಿತ್ಸೆಗೆಂದು ವಾಡಿ ನಗರದ ಡಾ.ಎಲ್.ಗೋವಿಂದ ನಾಯಕ ಖಾಸಗಿ ಆಸ್ಪತ್ರೆಗೆ ಹೋಗಿರುವುದಾಗಿ ಗೊತ್ತಾಗಿದೆ. ತಕ್ಷಣ ಖಾಸಗಿ ಆಸ್ಪತ್ರೆಗೆ ಆಗಮಿಸಿದ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು, ಆಸ್ಪತ್ರೆಯಿಂದಲೇ ಮಹಿಳೆಯನ್ನು ಕಲಬುರಗಿ ಇಎಸ್‌ಐಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆ ಕಂಡು ಆಸ್ಪತ್ರೆಯ ರೋಗಿಗಳು ಮತ್ತು ವೈದ್ಯರು ಆತಂಕಕ್ಕೊಳಗಾಗದ ಘಟನೆ ನಡೆಯಿತು.
ಘಟನೆಯಿಂದ ಆತಂಕಕ್ಕೀಡಾದ ಡಾ.ಗೋವಿಂದ ನಾಯಕ ಅವರು ಆಸ್ಪತ್ರೆಗೆ ಬೀಗ ಹಾಕಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ವಾಡಿ ಪಟ್ಟಣದ ಶಿವರಾಯ ಚೌಕಿ ಬಡಾವಣೆಯ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮಂಗಳವಾರ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.