ಸುರಪುರ: ನಗರದ ಶ್ರೀ ಜನನಿ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರು ಮತ್ತು ಪಾಲಕರ ಸುರಕ್ಷತೆಯ ಹಿತದೃಷ್ಠಿಯಿಂದ ಮತ್ತು ನೋವೆಲ್ ಕರೋನಾ ವೈರಸ್‌ನಿಂದ ರಕ್ಷಣೆ ಪಡೆಯಲು ಕಾಲೇಜಿನಲ್ಲಿ ಸ್ಯಾನಿಟೈಸರ್ ಅಳವಡಿಸಲಾಯಿತು, ಮತ್ತು ಆಡಳಿತ ಮಂಡಳಿಯ ವತಿಯಿಂದ ಎಲ್ಲ ಸಿಬ್ಬಂದಿಗಳಿಗೆ ಗ್ಲಾಸ್ ಮಾಸ್ಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಸವರಾಜೇಶ್ವರಿ ಘಂಟಿ ಮಾತನಾಡಿ, ಇಂದು ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ನೋವೆಲ್ ಕರೋನಾ ವೈರಸ್‌ನಿಂದ ನಾವೆಲ್ಲರೂ ರಕ್ಷಣೆ ಪಡೆಯಲು ಕಡ್ಡಾಯವಾಗಿ ಮುಖಗವಸು, ಕೈಗಳಿಗೆ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಜುಲೈ ತಿಂಗಳಿನಲ್ಲಿ ಪದವಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿದೆ ಇದರ ಪೂರ್ವ ತಯಾರಿ ಮಾಡಿಕೊಳ್ಳಲು ಸೂಚಿಸಿತ್ತು ಹೀಗಾಗಿ ನಮ್ಮ ಮಹಾವಿದ್ಯಾಲಯದಲ್ಲಿ ಸ್ಯಾನಿಟೈಸರ್ ಸ್ಟ್ಯಾಂಡ್‌ಗಳನ್ನು ಅಳವಡಿಸಲಾಗಿದೆ ಎಲ್ಲ ವಿದ್ಯಾರ್ಥಿನಿಯರು ಯವುದೇ ಆತಂಕವಿಲ್ಲದೆ ಕಡ್ಡಾಯವಾಗಿ ಮಾಸ್ಕಗಳನ್ನು ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಆದಿಶೇಷ ನೀಲಗಾರ, ಉಪನ್ಯಾಸಕರಾದ ಡಾ.ಮಲ್ಲಿಕಾರ್ಜುನ ಕಮತಗಿ, ಸುವರ್ಣ ಅಂಟೊಳಿ, ವೆಂಕಟೇಶ ಜಾಲಗಾರ, ತಿರುಪತಿ ಕೆಂಭಾವಿ, ಮಹೇಶ ಗಂಜಿ, ಚಂದ್ರಶೇಖರ ನಾಯಕ, ಮರೆಮ್ಮ ಕಟ್ಟಿಮನಿ, ಸ್ನೇಹ ಶಾಬಾದಿ, ಶ್ರೀದೇವಿ ನಾಯಕ, ಮತ್ತು ಇತರರು ಹಾಜರಿದ್ದರು.