೨೦೨೦, ಫೆ. ೪, ೫ ಮತ್ತು ೬ರಂದು ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್‌ನವರು ಹೊರ ತಂದಿರುವ “ಕವಿಜನಮಾರ್ಗ” ಎಂಬ ನೆನಪಿನ ಹೊತ್ತಿಗೆ (ಸ್ಮರಣ ಸಂಚಿಕೆ) ಸಂಗ್ರಹಯೋಗ್ಯವಾಗಿದೆ.
೩೨ ವರ್ಷಗಳ ಬಳಿಕ ಮತ್ತೆ ಕಲಬುರಗಿಯಲ್ಲಿ ನಡೆದ ಈ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವವೆನಿಸಿದಂತೆ ಸಮ್ಮೇಳನದ ಅಂಗವಾಗಿ ಹೊರ ತಂದಿರುವ ಸ್ಮರಣ ಸಂಚಿಕೆ ಕೂಡ ದಾಖಲಾರ್ಹವೆನಿಸಿದೆ. ಕರ್ನಾಟಕದ ಪ್ರತಿಷ್ಠಿತ ರಾಜಮನೆತನವಾದ ರಾಷ್ಟ್ರಕೂಟರ ಆಸ್ಥಾನದ ಕವಿ ಶ್ರೀವಿಜಯ ಬರೆದ “ಕವಿರಾಜಮಾರ್ಗ” ಲೋಕ ಪ್ರಸಿದ್ಧವಾದಂತೆ ಈ ಕವಿಜನಮಾರ್ಗ ಸ್ಮರಣ ಸಂಚಿಕೆ ಕೂಡ ಲೋಕ ಪ್ರಸಿದ್ಧವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದೆನಿಸುವಂತಿದೆ.
ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ, ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಡಾ. ಸ್ವಾಮಿರಾವ ಕುಲಕರ್ಣಿ ಹಾಗೂ ಡಾ. ನಾಗಾಬಾಯಿ ಬುಳ್ಳಾ ಅವರ ಪ್ರಧಾನ ಸಂಪಾದಕತ್ವದಲ್ಲಿ, ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಡಾ. ಈಶ್ವರಯ್ಯ ಮಠ ಅವರ ಸಂಪಾದಕತ್ವ ಮತ್ತು ಡಾ. ವಿಜಯಕುಮಾರ ಪರೂತೆ, ಡಾ. ಶರಣಬಸವ ವಡ್ಡನಕೇರಿ ಮುಂತಾದವರ ಸಂಚಾಲಕತ್ವದಲ್ಲಿ ಹೊರ ತಂದಿರುವ ಈ ಹೊತ್ತಿಗೆ ಕೇವಲ ಇವೊತ್ತಿಗೆ ಮಾತ್ರವಲ್ಲ ಎಂದೆಂದಿಗೂ ಸಂಗ್ರಹಿಸಿಡುವಂತಹ ಮಾಹಿತಿಪೂರ್ಣ ಕೃತಿಯಾಗಿದೆ.
ಕರ್ನಾಟಕ ಜನ ಮಾರ್ಗ, ಕಲ್ಯಾಣ ಜನಮಾರ್ಗ, ಕಲಬುರಗಿ ಜನ ಮಾರ್ಗ, ಪರಿಷತ್ ಮತ್ತು ಸಮ್ಮೇಳನಾಧ್ಯಕ್ಷರು ಎಂಬ ನಾಲ್ಕು ಭಾಗಗಳನ್ನಾಗಿ ಮಾಡಿ ಚರಿತ್ರೆ ಮತ್ತು ಸಂಸ್ಕೃತಿ, ಸಾಹಿತ್ಯ ಮತ್ತು ಜನಜೀವನ, ವಚನ-ಕೀರ್ತನ-ತತ್ವಪದ, ಜನಪರ-ಜಾನಪದ, ಕೃಷಿ- ಸ್ಥಿತಿಗತಿ, ವಿಚಾರ-ವಿಜ್ಞಾನ, ಜನಮನ ಸ್ಥಿತಿಗತಿ, ಶಾಸನ-ಸಾಹಿತ್ಯ, ಸಂಪನ್ಮೂಲ-ಅಭಿವೃದ್ಧಿ, ಸಾಹಿತ್ಯ-ವೈವಿಧ್ಯ, ಸೌಹಾರ್ದ ಸಂಸ್ಕೃತಿ, ಮಾಧ್ಯಮ. ಸಾಹಿತ್ಯ, ಜಾನಪದ- ಕಲೆ-ಸಮಾಜ, ಕೃಷಿ-ಶಿಕ್ಷಣ-ಚಳವಳಿ ಕುರಿತು ಒಟ್ಟು ೧೨೭ ವಿದ್ವಾಂಸರ ಪ್ರಬಂಧಗಳನ್ನು ಪ್ರಕಟಿಸಲಾಗಿದೆ.
ಕನ್ನಡ ನಾಡು-ನುಡಿ ವಿಭಾಗದಲ್ಲಿ ಗೊ.ರು.ಚ, ಡಾ. ವೀರಣ್ಣ ರಾಜೂರ, ಚಂಪಾ, ಡಾ. ಬಸವರಾಜ ಡೋಣೂರ, ಡಾ. ಲಿಂಗಪ್ಪ ಗೋನಾಲ, ಡಾ. ಗುರುಲಿಂಗಪ್ಪ ಧಬಾಲೆ, ಪ್ರೊ. ಸುಮಾ ಸಾವಂತ, ಡಾ. ಜಿ.ಎನ್. ಉಪಾದ್ಯ, ಡಾ. ವಿಕ್ರಮ ವಿಸಾಜಿ, ಡಾ. ರಂಗರಾಜ ವನದುರ್ಗ ಸೇರಿದಂತೆ ಒಟ್ಟು ೧೫ ವಿದ್ವಾಂಸರು ಕನ್ನಡದ ಸಂಘ-ಸಂಸ್ಥೆಗಳು, ಕನ್ನಡ ಚಾರಿತ್ರಿಕ ಕಾಲಘಟ್ಟ, ಕನ್ನಡ ಸಮಕಾಲೀನ ಸವಾಲುಗಳು, ಕನ್ನಡ ಭಾಷೆ ಕೇವಲ ಮಾಧ್ಯಮವಲ್ಲ, ಕನ್ನಡ ಶಾಲೆಗಳು, ಸರ್ಕಾರ ಮತ್ತು ಕನ್ನಡಿಗರ ಹೊಣೆಗಾರಿಕೆ ಹೊರ ನಾಡ ಕನ್ನಡಿಗರ ಸ್ಥಿತಿಗತಿ, ಗಡಿನಾಡು: ಕನ್ನಡ ಸ್ಥಿತಿ ಗತಿ ಕುರಿತು ವಿದ್ವತ್‌ಪೂರ್ಣವಾಗಿ ಬರೆದಿದ್ದಾರೆ.
ಚರಿತ್ರೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಕರ್ನಾಟಕ ಸಂಸ್ಕೃತಿಗೆ ರಾಷ್ಟ್ರಕೂಟರ ಕೊಡುಗೆ (ಮುಡಬಿ ಗುಂಡೇರಾವ), ಭರತ ವರ್ಷ ಮತ್ತು ಮಿತಾಕ್ಷರ (ಶ್ರೀನಿವಾಸ ಸಿರನೂರಕರ್) ಮುಂತಾದ ನಾಲ್ಕು ಲೇಖನಗಳಿವೆ. ಸಾಹಿತ್ಯ ಮತ್ತು ಜನಜೀವನ ವಿಭಾಗದಲ್ಲಿ ಕವಿರಾಜಮಾರ್ಗ ಮತ್ತು ಕವಿಜನಮಾರ್ಗದ ತೌಲನಿಕ ಅಧ್ಯಯನವನ್ನು ಡಾ. ಕಲ್ಯಾಣರಾವ ಪಾಟೀಲ ಮಾಡಿಕೊಟ್ಟಿದ್ದಾರೆ. ಕವಿರಾಜಮಾರ್ಗಕಾರನ ನುಡಿ ಭಾಷ್ಯ ಕುರಿತು ಡಾ. ಬಿ. ಶರಣಪ್ಪ ಸತ್ಯಂಪೇಟೆ, ಪುಸ್ತಕ ಸಂಸ್ಕೃತಿ ಕುರಿತು ಅಪ್ಪಾರಾವ ಅಕ್ಕೋಣಿ, ಕಥೆ ಕಟ್ಟುವ ಬಿಕ್ಕಟ್ಟುಗಳ ಕುರಿತು ಡಾ. ಅಮರೇಶ ನುಗಡೋಣಿ, ಸಾಹಿತ್ಯ ನಿರ್ಮಿತಿಯ ವಾಸ್ತವ ನೆಲೆ-ಬೆಲೆ ಕುರಿತು ಡಾ. ಬಸವರಾಜ ಸಾದರ ಹಾಗೂ ಇನ್ನಿತರ ವಿಷಯಗಳನ್ನು ಕುರಿತು ಬರೆದ ಒಟ್ಟು ೧೦ ಲೇಖನಗಳಿವೆ.
ವಚನ-ಕೀರ್ತನ-ತತ್ವಪದ ವಿಭಾಗದಲ್ಲಿ ವಚನಗಳಲ್ಲಿ ಕೃಷಿ ಸಂಸ್ಕೃತಿ (ಡಾ. ಸೋಮನಾಥ ಯಾಳವಾರ), ದಾನ-ದಾಸೋಹ (ಡಾ. ಜಯಶ್ರೀ ದಂಡೆ), ತತ್ವಪದಗಳಲ್ಲಿ ಕುಂಡಲಿನಿ ಶಕ್ತಿ (ಡಾ. ಮೀನಾಕ್ಷಿ ಬಾಳಿ), ತತ್ವಪದಗಳ ಗಾಯನ ಪರಂಪರೆ (ಮಲ್ಲಿಕಾರ್ಜುನ ಕಡಕೋಳ), ವೈದಿಕ ತತ್ವ ಶಾಸ್ತ್ರ ಕೃತಿಗಳು (ಪ್ರೊ. ಶಾಸ್ವತಸ್ವಾಮಿ ಮುಕ್ಕುಂದಿಮಠ) ಮುಂತಾದವರು ಬರೆದ ಒಟ್ಟು ೧೮ ಲೇಖನಗಳಿವೆ.
ಜನಪರ-ಜನಪದ ವಿಭಾಗದಲ್ಲಿ ಜನಪದ ವೃತ್ತಿರಂಗಕಲೆ (ಡಾ. ಶ್ರೀರಾಮ ಇಟ್ಟಣ್ಣನವರ್), ಜನಪದ ಕಲಾವಿದರ ಅನುಭವ ಕಥನ (ಡಾ. ಅಪ್ಪಗೆರೆ ಸೋಮಶೇಖರ) ಮುಂತಾದ ೬ ಲೇಖನಗಳಿವೆ. ಕೃಷಿ: ಸ್ಥಿತಿಗತಿ ವಿಭಾಗದಲ್ಲಿ ರೈತರ ಆತ್ಮಹತ್ಯೆ (ಡಾ. ವೀರಣ್ಣ ದಂಡೆ), ಪಾಳೇಗಾರಿ ಸಮಾಜದಿಂದ ರೈತಾಪಿ ಸಮಾಜದೆಡೆಗೆ (ರಂಜಾನ್ ದರ್ಗಾ) ಸೇರಿದಂತೆ ನಾಲ್ಕು ಲೇಖನಗಳಿವೆ.
ವಿಚಾರ-ವಿಜ್ಞಾನ ವಿಭಾಗದಲ್ಲಿ ಬುದ್ಧ ದರ್ಶನ ಮಹಾಯೋಗ (ಪ್ರೊ. ಎಚ್.ಟಿ. ಪೋತೆ), ದಲಿತರು ಮತ್ತು ಸಮಕಾಲೀನ ಸಮಸ್ಯೆಗಳು (ಪ್ರೊ. ಶಿವಾನಂದ ಕೆಳಗಿನಮನಿ), ನಮ್ಮ ಮಿದುಳಿನೊಳಗೊಂದು ಗಡಿಯಾರ (ಡಾ. ಸಿ.ಆರ್. ಚಂದ್ರಶೇಖರ) ಮುಂತಾದ ಎಂಟು ಲೇಖನಗಳಿವೆ. ಜನಮನ: ಸ್ಥಿತಿ-ಗತಿ ವಿಭಾಗದಲ್ಲಿ ವಿಮೋಚನಾ ಚಳವಳಿ (ವಸಂತ ಕುಷ್ಟಗಿ), ಜನಮನ: ಸ್ಥಿತಿ-ಗತಿ (ಶಿವರಂಜನ್ ಸತ್ಯಂಪೇಟೆ), ಕನ್ನಡ ಕಟ್ಟಿದ ಮಠಗಳು (ಡಾ. ಕೆ. ರವೀಂದ್ರನಾಥ) ಹೀಗೆ ಆರು ಲೇಖನಗಳಿವೆ.
ಶಾಸನ-ಸಾಹಿತ್ಯ ವಿಭಾಗದಲ್ಲಿ ಶಾಸನಗಳು, ಮಹಿಳಾ ವಚನ ಸಾಹಿತ್ಯ, ಸೂಫಿ ಸಂತರು, ಆಧುನಿಕ ಕೀರ್ತನಕಾರರು ಹಾಗೂ ಇತರ ವಿಷಯಗಳು ಕುರಿತು ಡಾ. ಚೆನ್ನಬಸವಯ್ಯ ಹಿರೇಮಠ, ಡಾ. ಚಿತ್ಕಳಾ ಜಿ. ಮಠಪತಿ, ಡಾ. ಶಾಂತಾ ಮಠ, ಡಾ. ಸುರೇಶ ಎಲ್. ಜಾಧವ ಮುಂತಾದವರ ಏಳು ಲೇಖನಗಳಿವೆ. ಸಂಪನ್ಮೂಲ-ಅಭಿವೃದ್ಧಿ ವಿಭಾಗದಲ್ಲಿ ಖನಿಜ ಸಂಪತ್ತು, ಶೈಕ್ಷಣಿಕ ಗುಣಮಟ್ಟ, ವಿಕಾಸ, ನ್ಯಾಯಾಂಗ ವ್ಯವಸ್ಥೆ ಕುರಿತು ಎಚ್. ಚಂದ್ರಶೇಖರ, ಶಿವರಾಜ ಪಾಟೀಲ, ಮಲ್ಲಿಕಾರ್ಜುನಯ್ಯ ಎಸ್. ಹಿರೇಮಠ ಮುಂತಾದವರು ಬರೆದಿದ್ದಾರೆ.
ಆಧುನಿಕ ಕಾವ್ಯ ಪರಂಪರೆ (ಡಾ, ಬಸವರಾಜ ಸಬರದ), ಮಕ್ಕಳ ಸಾಹಿತ್ಯ (ಎ.ಕೆ. ರಾಮೇಶ್ವರ), ನಾಟಕ ಸಾಹಿತ್ಯ (ಡಾ. ಅಮೃತಾ ಕಟಕೆ), ಗಜಲ್ ಸಾಹಿತ್ಯ (ಮಹಿಪಾಲರೆಡ್ಡಿ ಮುನ್ನೂರ), ವೈದ್ಯ ಸಾಹಿತ್ಯ (ಡಾ. ಪಿ.ಎಸ್. ಶಂಕರ) ಮುಂತಾದವರು ಬರೆದ ಒಟ್ಟು ೧೦ ಲೇಖನಗಳು ಸಾಹಿತ್ಯ ವೈವಿದ್ಯ ವಿಭಾಗದಲ್ಲಿ ಇವೆ. ಅದೇರೀತಿಯಾಗಿ ಸೌಹಾರ್ದ ಸಂಸ್ಕೃತಿ ವಿಭಾಗದಲ್ಲಿ ಸಿದ್ಧರಾಮ ಹೊನಕಲ್ ಅವರ ಸಗರ ನಾಡು, ಡಾ. ಜಗನ್ನಾಥ ಹೆಬ್ಬಾಳೆ ಹಾಗೂ ಇನ್ನಿತರರು ಬರೆದ ಜಾತ್ರೆ-ಉತ್ಸವಗಳು ಮುಂತಾದ ಆರು ಲೇಖನಗಳಿವೆ. ಮುದ್ರಣ ಮಾಧ್ಯಮ ಕುರಿತು ಡಾ. ಶಿವರಾಮ ಅಸುಂಡಿ, ವಿದ್ಯುನ್ಮಾನ ಮಾಧ್ಯಮ ಕುರಿತು ಎಂ.ಬಿ. ಪಾಟೀಲ ಅವರು ಮಾಧ್ಯಮ ವಿಭಾಗದಲ್ಲಿ ಬರೆದಿದ್ದಾರೆ.
ಕಲಬುರಗಿ ಜನಮಾರ್ಗ ಭಾಗ ಮೂರರಲ್ಲಿ ಕಲಬುರಗಿ ಜಿಲ್ಲೆಯ ಇತಿಹಾಸ, ಭಾಷೆ, ಜನ, ಪರಂಪರೆ, ಸಾಹಿತ್ಯ, ಜನಪದ ಕಲೆ, ಸಮಾಜ, ಕೃಷಿ, ಶಿಕ್ಷಣ, ಚಳವಳಿ, ನೀರಾವರಿ ಇನ್ನಿತರ ವಿಷಯಗಳ ಕುರಿತು ಡಾ. ಎಸ್.ಕೆ. ಅರುಣಿ, ಡಾ. ಶ್ರೀಶೈಲ ನಾಗರಾಳ, ಡಾ. ಮಹಾದೇವ ಬಡಿಗೇರ, ಡಾ. ಶಂಭುಲಿಂಗ ವಾಣಿ, ಫರ್ವಿನ್ ಸುಲ್ತಾನಾ, ಡಾ. ನಾಗೇಂದ್ರ ಮಸೂತಿ, ಡಾ. ವಿಜಯಕುಮಾರ ಪರುತೆ, ಡಾ. ಸುರೇಂದ್ರಕುಮಾರ ಕೆರಮಗಿ ಮುಂತಾದವರು ಸೇರಿದಂತೆ ಒಟ್ಟು ೨೨ಲೇಖನಗಳಿವೆ.
ನಾಲ್ಕನೆ ಭಾಗದಲ್ಲಿ ಕಲಬುರಗಿ ಕಸಾಪ ನಡೆದು ಬಂದ ದಾರಿ ಕುರಿತು ಡಾ. ಸೂರ್ಯಕಾಂತ ಪಾಟೀಲ ಲೇಖನ ಸೇರಿದಂತೆ ಸಮ್ಮೇಳನಾಧ್ಯಕ್ಷ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ನನ್ನ ಬಾಲ್ಯ ಕಾಳದ ಮಾಸ್ತರು, ಎಚೆಸ್ವಿ ಕಾವ್ಯಾನುಸಂಧಾನ (ಪ್ರೊ. ರಾಘವೇಂದ್ರ ಪಾಟೀಲ), ಎಚ್‌ಎಸ್ವಿ ಸಂದರ್ಶನ (ಡಾ. ಕೊಡ್ಲೆಕೆರೆ ಚಿಂತಾಮಣಿ ) ಲೇಖನದಲ್ಲಿದ್ದು, ಕೊನೆಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಮತ್ತು ಉಪಸಮಿತಿಗಳ ವಿವರ ಹಾಗೂ ಲೇಖಕರ ವಿಳಾಸಗಳಿವೆ.
ಸ್ಮರಣ ಸಂಚಿಕೆಯನ್ನು ನೆನಪಿನ ಹೊತ್ತಿಗೆ ಎಂದು ಕರೆದಿರುವ ಸಂಪಾದಕ ಮಂಡಳಿಯವರು ಈವರೆಗೆ ಬರುತ್ತಿದ್ದ ಸ್ಮರಣ ಸಂಚಿಕೆಯ ಕಲ್ಪನೆಯನ್ನೇ ಕಿತ್ತು ಹಾಕಿ ಅದಕ್ಕೊಂದು ಹೊಸ ವಿನ್ಯಾಸ ತೊಡಿಸಿ
ಇದನ್ನೊಂದು ಪಿಎಚ್.ಡಿ. ಮಹಾಪ್ರಬಂಧದ ರೂಪದಲ್ಲಿ ಹೊರ ತಂದಿದ್ದಾರೆ. ಆಕರ್ಷಕ ಮುಖಪುಟ ವಿನೂತನ ವಿನ್ಯಾಸ, ಐಎಸ್‌ಬಿಎನ್ ಸಂಖ್ಯೆ ಹೊಂದಿರುವ, ೬೭೮ ಪುಟಗಳ ಈ ಗ್ರಂಥವು ನವ ನಾವಿನ್ಯತೆಯಿಂದ ಕೂಡಿದೆ. ಸ್ಮರಣ ಸಂಚಿಕೆಯ ಸಂಪಾದಕರಾದ ಡಾ. ಕಲ್ಯಾಣರಾವ ಜಿ. ಪಾಟೀಲ ಹಾಗೂ ಡಾ. ಈಶ್ವರಯ್ಯ ಮಠ ಅವರ ಶ್ರಮ ಸಾರ್ಥಕವಾಗಿದೆ ಎಂದು ಹೇಳಬಹುದು.