ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಸುರಕ್ಷತಾ ಕ್ರಮ ಕೈಗೊಂಡು ಜೂನ್ 25ರಿಂದ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಸುಗಮವಾಗಿ ನಡೆಸುವಂತೆ ಜಿಲ್ಲಾಧಿಕಾರಿಗಳಾದ ಶರತ್.ಬಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಸಂದರ್ಭದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಬಾರದು. ಸೂಕ್ತ ಸಾರಿಗೆ ಮತ್ತು ಆರೋಗ್ಯ ತಪಾಸಣಾ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಪರೀಕ್ಷೆಗೆ ಮೊದಲು ಮತ್ತು ನಂತರದಲ್ಲಿ ಶಾಲಾ ಕೊಠಡಿಗಳು ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು. ಶೌಚಾಲಯಗಳ ಬಳಿ ಕೈತೊಳೆದುಕೊಳ್ಳಲು ಸೋಪಿನ ವ್ಯವಸ್ಥೆ ಮಾಡಬೇಕು. ಪ್ರತಿ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳು/ಪೀಠೋಪಕರಣಗಳನ್ನು ಸ್ಯಾನಿಟೈಸ್ ಮಾಡುವುದು. ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವ ಪ್ರದೇಶದಲ್ಲಿ ಹಾಗೂ ಪರೀಕ್ಷಾ ಕೊಠಡಿಗಳಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಪಾಲನೆ ಮಾಡಬೇಕು ಎಂದು ಹೇಳಿದರು.
ಕೋವಿಡ್-19 ಸೋಂಕಿನ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವ ಅಥವಾ ಕಂಟೈನ್‍ಮೆಂಟ್ ವಲಯದಿಂದ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕವಾಗಿ 2 ವಿಶೇಷ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಪ್ರಾರಂಭವಾದ ನಂತರದಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‍ಮೆಂಟ್ ವಲಯದೊಳಗೆ ಬಂದರೆ ಸಂಬಂಧಪಟ್ಟ ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಈ ಕುರಿತು ಮೂಲ ಪರೀಕ್ಷಾ ಕೇಂದ್ರದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದರು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ 200 ಮಕ್ಕಳಿಗೆ ಒಂದರಂತೆ “ಆರೋಗ್ಯ ತಪಾಸಣಾ ಕೌಂಟರ್”ನ್ನು ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿ ಸ್ಥಾಪಿಸಬೇಕು. ಒಂದು ವೇಳೆ ವಿದ್ಯಾರ್ಥಿ “ಕೋವಿಡ್ ಪಾಸಿಟಿವ್” ಎಂದು ಈಗಾಗಲೇ ಗುರುತಿಸಲ್ಪಟ್ಟಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಿ ಅದನ್ನು “ಪ್ರಥಮ ಅವಕಾಶ” ವೆಂದು ಪರಿಗಣಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಪಿ.ರಾಜಾ ಮಾತನಾಡಿ, ಪ್ರತಿ ತಾಲ್ಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರ ಸ್ಥಾನಗಳಲ್ಲಿ ಕನಿಷ್ಠ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ, ಅವುಗಳನ್ನು ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳಾಗಿ ಇಡಬೇಕು ಎಂದು ಸೂಚಿಸಿದರು.
ಪ್ರವೇಶ ಪತ್ರಗಳನ್ನು ತೋರಿಸಿ, ಎಲ್ಲಾ ವಿದ್ಯಾರ್ಥಿಗಳು ಉಚಿತವಾಗಿ ಬಸ್‍ನಲ್ಲಿ ಓಡಾಡಬಹುದಾಗಿದೆ. ಸಾರಿಗೆ ವ್ಯವಸ್ಥೆ ಕುರಿತು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರದಲ್ಲಿ ಸಹಾಯವಾಣಿ ತೆರೆದು ಪ್ರಚಾರ ಮಾಡಬೇಕು. ಬಸ್‍ನಲ್ಲಿ ಪ್ರಯಾಣಿಸುವ ಪ್ರತಿ ವಿದ್ಯಾರ್ಥಿಯು ಮುಖಗವಸು ಧರಿಸಿರಬೇಕು. ಕನಿಷ್ಠ ಒಂದು ಮೀಟರ್ ಆಂತರ ಕಾಯ್ದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಅಜೀಂ ಪ್ರೇಮ್‍ಜಿ ಫೌಂಡೇಷನ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ 43 ಸಾವಿರ ಮಾಸ್ಕ್ ಕೊಡಲಾಗಿದ್ದು, ಮಾಸ್ಕ್ ಧರಿಸಿ ಬಾರದ ವಿದ್ಯಾರ್ಥಿಗಳಿಗೆ ನೀಡುವಂತೆ ತಿಳಿಸಿದರು.
ಸರ್ಕಾರಿ ಬಸ್/ ಖಾಸಗಿ ಶಾಲಾ ಬಸ್‍ಗಳು ಸಂಚರಿಸಿದ ಹಳ್ಳಿಗಳಿಗೆ ನಾಲ್ಕು ಚಕ್ರದ ಲಘುವಾಹನ ಬಳಸಿ ವಿದ್ಯಾರ್ಥಿಗಳನ್ನು ಅವರರವರ ಸ್ಥಳಗಳಿಗೆ ಕರೆದೊಯ್ಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಪಿ. ಬಾಡಂಗಡಿ ಅವರು ಮಾತನಾಡಿ, ಕಲಬುರಗಿಯಲ್ಲಿ ಅಂತಹ ಯಾವುದೇ ಹಳ್ಳಿಗಳಿಲ್ಲ. ಎಲ್ಲಾ ಕಡೆ ಬಸ್‍ಗಳು ಓಡಾಡಲು ರಸ್ತೆಯೋಗ್ಯವಾಗಿವೆ ಎಂದು ಮಾಹಿತಿ ನೀಡಿದರು.
ಖಾಸಗಿ ಶಾಲಾ ಬಸ್‍ಗಳಿಗೆ ದಿನವೊಂದಕ್ಕೆ 5000 ರೂಪಾಯಿ ಬಾಡಿಗೆ ಕೇಳುತ್ತಿದ್ದು, ಇದಕ್ಕೆ ತುಂಬಲು ನಮ್ಮ ಕಚೇರಿಯಿಂದ ಯಾವುದೇ ಅನುದಾನವಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಅನುದಾನ ಕೋರುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಹಾಗೂ ಎನ್‍ಇಕೆಎಸ್‍ಆರ್‍ಟಿಸಿ ಅಧಿಕಾರಿಗಳು, ಪರೀಕ್ಷೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜೆಸ್ಕಾಂ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.