ಸುರಪುರ: ಅನೇಕ ವರ್ಷಗಳ ನಂತರ ಕಂಡುಬಂದ ರಾಹುಗ್ರಸ್ತ ಸೂರ್ಯ ಗ್ರಹಣದ ಅಂಗವಾಗಿ ವೈದಿಕ ಸಂಪ್ರದಾಯಸ್ತರು ರೀತಿಯ ಆಚರಣೆಗಳನ್ನು ನಡೆಸಿ ದೇವರಲ್ಲಿ ಪ್ರಾರ್ಥಿಸಿದರು.ಬೆಳಿಗ್ಗೆ ೧೦:೩೦ಕ್ಕೆ ಆರಂಭಗೊಂಡ ಗ್ರಹಣದ ಸಮಯಕ್ಕೆ ಸರಿಯಾಗಿ ಕೃಷ್ಣಾ ನದಿಯಲ್ಲಿ ಸ್ನಾನಕ್ಕೆ ಇಳಿದು ದೇವರ ನಾಮ ಸ್ಮರಣೆ ನಡೆಸಿದರು.ಇನ್ನೂ ಕೆಲವರು ಕತ್ತಿನ ವರೆಗೆ ನೀರಲ್ಲಿ ಮುಳುಗಿ ಮಂತ್ರ ಪಠಣ ನಡೆಸಿದರು.
ಗ್ರಹಣದ ವಿಚಾರವಾಗಿ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದ ಉಪೇಂದ್ರ ಆಚಾರ್ಯ ಮಾತನಾಡಿ,ರಾಹುಗ್ರಸ್ತ ಸೂರ್ಯ ಗ್ರಹಣದ ಸಂದರ್ಭದಲ್ಲಿ ಲೋಕಕ್ಕೆ ಯಾವುದೆ ರೀತಿಯ ತೊಂದರೆಗಳು ಬಾರದಿರಲೆಂದು ದೇವರಲ್ಲಿ ಪ್ರಾರ್ಥಿಸಲಾಗುತ್ತಿದೆ.ಇಂತಹ ಗ್ರಹಣದ ಸಂದರ್ಭದಲ್ಲಿ ನದಿಯಲ್ಲಿ ಸ್ನಾನ ಮಾಡಿ ಸಹಸ್ರ ನಾಮ ಸ್ತೋತ್ರ ಪಠಣ,ಮಂತ್ರ ಪಠಣ ಹಾಗು ವೇದಾದ್ಯಾಯನ ಗಾಯತ್ರಿ ಮಂತ್ರ ಪಠಣ ಇವೆಲ್ಲವೂ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ನಂಬಿಕೆ ಹಾಗು ಆಚರಣೆಯಾಗಿದ್ದು.ಇದರ ಮೂಲಕ ಲೋಕ ಕಲ್ಯಾಣಕ್ಕಾಗಿ ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.
ಈಗ ಕೊರೊನಾ ವೈರಸ್ ಹಾವಳಿಯಿಂದ ಇಡೀ ಜಗತ್ತೆ ನಲುಗಿದೆ,ಕೊರೊನಾ ನಿರ್ಮೂಲನೆಯಾಗಲಿ ಮತ್ತು ಇಂತಹ ಯಾವ ಪಿಡಗುಗಳು ಲೋಕವನ್ನು ಬಾಧಿಸದಿರಲೆಂದು ಪ್ರಾರ್ಥನೆ ಮಾಡುವುದೆ ಈ ಸ್ನಾನದ ಹಿಂದಿನ ಉದ್ದೇಶವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷ್ಣಾ ನದಿಯ ಅನೇಕ ಸ್ಥಳಗಳಲ್ಲಿ ಜನರು ನೀರಲ್ಲಿ ಕುಳಿತು ಜಪ ಮಾಲೆ ಹಿಡಿದು ಜಪ ತಪಗಳನ್ನು ಮಾಡುತ್ತಿರುವುದು ಕಂಡುಬಂತು.ಈ ಸಂದರ್ಭದಲ್ಲಿ ಶ್ರೀನಿವಾಸ ಪ್ರತಿನಿಧಿ,ಪ್ರಕಾಶ ಕುಲಕರ್ಣಿ,ಕೃಷ್ಣಾ ಕುಲಕರ್ಣಿ,ಕೃಷ್ಣಾ ಜೋಶಿ ಸೇರಿದಂತೆ ಅನೇಕರಿದ್ದರು.