ವಾಡಿ: ಜಿಪಂ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಶಿವಾನಂದ ಪಾಟೀಲ ಅವರು ಚಿತ್ತಾಪುರದಲ್ಲಿ ಕಮಿಷನ್ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಆರೋಪಿಸಿದರು.
ಪಟ್ಟಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ, ಪಿಡಬ್ಲುಡಿ ಇಲಾಖೆಯ ೫ ಕೋಟಿ ರೂ. ಅನುದಾನದ ಮಾರಡಗಿ-ಶ್ರೀರಾಂಪುರ ವರೆಗಿನ ಡಾಂಬರೀಕರಣ ರಸ್ತೆ ನಿರ್ಮಾಣ ಗುತ್ತಿಗೆ ಕೆಲಸ ಸಿದ್ದಪ್ಪಗೌಡ ಎಂಬವವರ ಹೆಸರಿನಲ್ಲಿ ಟೆಂಡರ್ ಆಗಿದೆ. ೫ ಕೋಟಿ ಅನುದಾನದ ಭಂಕೂರ-ಮತ್ತಗಾ ಬ್ರಿಡ್ಜ್, ೫ ಕೋಟಿ ರೂ. ಅನುದಾನದ ಕಡಬೂರ-ಬಳವಡಗಿ, ೩ ಕೋಟಿ ರೂ. ಅನುದಾನದ ಭಾಗೋಡಿ-ಮರಗೋಳ, ೩ ಕೋಟಿ ವೆಚ್ಚದ ಸಾತನೂರ-ಅಳ್ಳೊಳ್ಳಿ ಹಾಗೂ ೨ ಕೋಟಿ ರೂ. ಅನುದಾನದ ನಾಗಾವಿ-ರಿಂಗ್ ರಸ್ತೆ ವರೆಗಿನ ರಸ್ತೆ ಅಭಿವೃದ್ಧಿಗಾಗಿ ಗುತ್ತಿಗೆದಾರ ವೀರಶೆಟ್ಟಿ ಹೆಸರಿನಲ್ಲಿ ಟೆಂಡರ್ ಆಗಿದೆ. ಒಟ್ಟು ೨೩ ಕೋಟಿ ರೂ. ಅನುದಾನದ ಎಲ್ಲಾ ರಸ್ತೆ ಕಾಮಗಾರಿಗಳನ್ನು ಶಾಸಕ ಪ್ರಿಯಾಂಕ್ ಖರ್ಗೆ ಆಪ್ತ, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಅವರು ಕಮಿಷನ್ ಲೆಕ್ಕದಲ್ಲಿ ಗುತ್ತಿಗೆದಾರನಾಗಿ ಅನುದಾನ ಲೂಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ವಾಲ್ಮೀಕಿಗೆ ಅನುಭವದ ಕೊರತೆಯಿದೆ ಎಂದು ಪತ್ರಿಕೆ ಹೇಳಿಕೆ ನೀಡಿರುವ ಶಿವಾನಂದ ಪಾಟೀಲಗೆ ಗುತ್ತಿಗೆದಾರರನ್ನು ಹೆದರಿಸಿ ಬೆದರಿಸಿ ಹೇಗೆ ಸರಕಾರದ ಹಣ ಲಪಟಾಯಿಸಬಹುದು ಎಂಬುದರ ಕುರಿತು ಚೆನ್ನಾಗಿ ಅನುಭವವಿದೆ ಎಂದು ತಿರುಗೇಟು ನೀಡಿದರು. ಮಾರಡಗಿ-ಶ್ರೀರಾಂಪುರ ರಸ್ತೆ ಅಭಿವೃದ್ಧಿಗೆ ಜಮೀನು ಕಳೆದುಕೊಂಡ ಅಲ್ಲಿನ ರೈತರು ಪರಿಹಾರ ಮೊತ್ತಕ್ಕಾಗಿ ತಕರಾರು ತೆಗೆದಿದ್ದರು. ಸಮಸ್ಯೆ ಇತ್ಯರ್ಥವಾಗುವ ವರೆಗೂ ಕಾಮಗಾರಿ ನಿಲ್ಲಿಸುವಂತೆ ತಹಸೀಲ್ದಾರರು ಆದೇಶ ನೀಡಿದ್ದರೂ ಕ್ಯಾರೆ ಎನ್ನದ ಕಮಿಷನ್ ಗುತ್ತಿಗೆದಾರ ಶಿವಾನಂದ ಪಾಟೀಲ, ರಸ್ತೆ ಪೂರ್ಣಗೊಳಿಸಿ ರೈತರಿಗೆ ಮೋಸ ಮಾಡಿದ್ದಾರೆ.
ಇವರು ಮಾಡಿರುವ ರಸ್ತೆಗಳೆಲ್ಲವೂ ಕಳಪೆಯಾಗಿವೆ. ಇಂಥಹ ಮುಖಂಡರಿಗೆ ಬುದ್ದಿ ಕಲಿಸಬೇಕಸದ ಶಾಸಕ ಪ್ರಿಯಾಂಕ್ ಮೌನ ವಹಿಸಿದ್ದಾರೆಂದರೆ ಅವರಿಗೂ ಇದರಲ್ಲಿ ಪಾಲು ಹೋಗುತ್ತಿರಬಹುದು ಎಂದು ದೂರಿದರು. ಕೂಡಲೆ ಈ ಕುರಿತು ತನಿಖೆಯಾಗಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದ ಕಾಂಗ್ರೆಸ್‌ನ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ವಿರುದ್ಧ ಕ್ರಮಕೈಗೊಳ್ಳಬೇಕು. ಸಂಬಂದಿಸಿದ ಜೆಇ ಮತ್ತು ಎಇಇ ಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಕಳಪೆ ಕಾಮಗಾರಿಯ ಎಲ್ಲಾ ರಸ್ತೆಗಳನ್ನು ಮರುನಿರ್ಮಾಣ ಮಾಡಬೇಕು ಎಂದು ವಾಲ್ಮೀಕಿ ನಾಯಕ ಆಗ್ರಹಿಸಿದರು.
ಬಿಜೆಪಿ ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಮುಖಂಡರಾದ ರಿಚ್ಚರ್ಡ್ ಮರೆಡ್ಡಿ, ದೌಲತರಾವ ಚಿತ್ತಾಪುರಕರ ಇದ್ದರು.