ಬಯಲುಡುಗೆಯ ಶರಣೆ ಬೊಂತಾದೇವಿ ನಿಮಗೆಷ್ಟು ಗೊತ್ತು?

0
417

ಬಟ್ಟಬಯಲ ಮಹಾಮನೆಯೊಳಗೊಂದು
ಹುಟ್ಟದ ಹೊಂದದ ಶಿಶುವ ಕಂಡೆ.
ಮುಟ್ಟಿ ಪೂಜಿಸಹೋದಡೆ
ನೆಟ್ಟನೆ ಆ ಶಿಶು ತನ್ನುವ ನುಂಗಿತ್ತು
ಮುಟ್ಟಲಿಲ್ಲ ನೋಡಲಿಲ್ಲ, ಪೂಜೆಗೆ ಕಟ್ಟಳೆ ಮುನ್ನಿಲ್ಲ.
ಗುಹೇಶ್ವರ ಬಯಲು !
-ಅಲ್ಲಮಪ್ರಭು

ಸರ್ವಶೂನ್ಯವಾಗಿ, ಅಖಂಡ ಪ್ರಸನ್ನವಾಗಿರುವ ನಿಜನಿರಾಳ ನಿರಾಲಂಬದಲ್ಲಿ ಬೆಳಗುವ ಮಹಾಬೆಳಗೇ ಮಹಾಮನೆ. ಆ ಮಹಾಮನೆಯಲ್ಲಿ ಅಖಂಡ ತೇಜೋರಾಶಿಯಾದ ಸ್ವಯಂಭು ಲಿಂಗ. ಹುಟ್ಟದ ಹೊಂದದ ಶಿಶು ತನ್ನ ತಾನೆ ಅಖಂಡ ಗೋಳಾಕಾರವಾಗಿ ಉದಯವಾದರೆ, ಅದನ್ನು ಕಂಡಕೊಂಡವರು ಶರಣರು. ಆ ಲಿಂಗವನ್ನು ಮುಟ್ಟಿ ಪೂಜಿಸಿದವರು ಶರಣರು. ನಿಮ್ಮ ನಂಬಿದ ಬಳಿಕ ನಾನು ಬಯಲಾದೆ. ಶರಣ ಲಿಂಗ, ಭಕ್ತ ದೇವ ಸಮರಸವಾಗಿ, ನೀಷ್ಪತ್ತಿಯಾಗಿ ನಿಂದ ಬಯಲು. ಯಾರನ್ನು ಯಾರು ಮುಟ್ಟಬೇಕು, ನೋಡಬೇಕು, ಪೂಜಿಸಬೇಕೆಂದು ಅಲ್ಲಮಪ್ರಭುಗಳ ಅದ್ಭುತವಾದ ತತ್ವವನೊಳಗೊಂಡ ವಚನ. ಶರಣರು ನಿಶ್ಚಿಂತ ನಿರಾಳವಾದ ಪೂಜೆಯೊಂದಿಗೆ ಈ ಬಯಲಿಗೆ ಬಂದು, ಬಯಲನ್ನು ಕಂಡುಕೊಂಡು ಬಯಲೊಳಗೆ ಬಯಲಾದ ಪರಿಂiiನ್ನು ಅನುಭವಿಸಲು ಅರಸುತ್ತಾ ಬಂದ ಬೊಂತಾದೇವಿಯವರು ವೀರ ವಿರಾಗಿಣಿಯಾಗಿ ಬಯಲಾದರು.

Contact Your\'s Advertisement; 9902492681

ಕಾಶ್ಮೀರದ ಮಾಂಡವ್ಯಪುರ ರಾಜನ ಮಗಳಾದ ನಿಜದೇವಿ ಚಿಕ್ಕಂದಿನಿಂದಲೂ ಶಿವಭಕ್ತಿಯಲ್ಲಿ ತಲ್ಲೀನಳಾಗಿರುತ್ತಿದ್ದಳು. ದೊಡ್ಡವಳಾದಂತೆ ಅವಳಲ್ಲಿ ವೈರಾಗ್ಯ ಭಾವವು ಗಟ್ಟಿಗೊಂಡು ರಾಜಮನೆತನದ ಸುಖಭೋಗಗಳನ್ನು ತ್ಯಜಿಸಿ, ತನ್ನ ಉಡಿಗೆ ತೊಡುಗೆಗಳನ್ನು ಸಹ ಬಿಟ್ಟುಕೊಟ್ಟು ದಿಗಂಬರಿಯಾದಳು. ಆಗ ತಂದೆ ತಾಯಿಗಳು ಮಗಳ ಕಂಡು ಎಲೇ ಮಗಳೇ, ಇದೆಲ್ಲಿಯ ಭ್ರಾಂತಿ ನಿನಗೆ ? ಈ ಮಾರ್ಗವನ್ನು ಬಿಟ್ಟುಬಿಡು ಎಂದು ಎಷ್ಟು ಪರಿಯಿಂದ ಹೇಳಿದರೂ ಕೇಳದೆ, ನನಗೆ ಶಿವನ ಭ್ರಾಂತಿಯುಂಟಾಗಿದೆ ನಿಮ್ಮ ಯಾವ ರಾಜ್ಯವೈಭವವು ಬೇಡ. ನನಗೆ ಕಲ್ಯಾಣದಲ್ಲಿರುವ ಬಸವಾದಿ ಶರಣರ ಬಳಿಗೆ ಹೋಗುವ ತವಕವಾಗಿದೆ ಎನ್ನುತ್ತಾ ಕಲ್ಯಾಣದ ಕಡೆಗೆ ಹೊರಟಳು.
ಪಾದಚಾರಿಯಾಗಿ ಘೋರಾರಣ್ಯಗಳನ್ನು ಪ್ರವೇಶಿಸುತ್ತ ಬರುತ್ತಿರುವ ನಿಜದೇವಿಗೆ ಮಾರ್ಗಮಧ್ಯದಲ್ಲಿ ತುಂಬಾ ಜನರು ಕಾಡಿದರೂ ಹೆದರದೆ ಧೈರ್ಯದಿಂದ ಮುಂದುವರಿಯುತ್ತಿದ್ದಳು. ಅತ್ಯಂತ ಲಾವಣ್ಯವತಿಯು ವೈರಾಗ್ಯಶೀಲೆಯಾದ ನಿಜದೇವಿಯನ್ನು ಶಿವನು ಪರೀಕ್ಷಿಸಬೇಕೆಂದು ಒಮ್ಮೆ ಸುಂದರ ಯುವಕನ ರೂಪ ಧರಿಸುತ್ತಾ, ಮತ್ತೊಮ್ಮೆ ಒಬ್ಬ ವ್ಯಾಪಾರಸ್ಥನ ವೇಷ ಧರಿಸುತ್ತಾ ಅವಳಿದ್ದೆಡೆಗೆ ಬಂದು ಎಲೇ ನಿಜದೇವಿಯೇ, ನೀನು ನನ್ನ ಸತಿಯಾಗಿ ನನ್ನೊಡನೆ ಸುಖವಾಗಿ ಬಾಳು ಎಂದು ಕೇಳಿಕೊಳ್ಳುತ್ತಾನೆ. ಆದರೆ ನಿಜದೇವಿಯು ಅವನಾರೆಂಬುದುನ್ನು ತಕ್ಷಣವೆ ತನ್ನ ಸುಜ್ಞಾನದಿಂದ ಅರಿತು, ನಗುತ್ತಾ ನೀನಾರೆಂಬುದು ನನಗೆ ತಿಳಿಯಿತು. (ವೇಷಧಾರಿಯಾದ ಶಿವನನ್ನು ಗುರುತಿಸಿ) ’ಕಾಮವೈರಿಯಾದ ನಿನ್ನನ್ನು ಹೇಗೆ ಮದುವೆಯಾಗಲಿ? ನಿನಗೆ ಈಗಾಗಲೇ ಇಬ್ಬರು ಹೆಂಡತಿಯರು! ಮತ್ತೊಬ್ಬಳೇಕೆ ಎಂದು ಶಿವನನ್ನೇ ಪ್ರಶ್ನಿಸುತ್ತಾ, ಕಲ್ಯಾಣದ ಕಡೆಗೆ ಹೊರಟಿರುವ ನಾನು ನಿನ್ನನ್ನು ವರಿಸಿದರೆ, ಬಸವಾದಿ ಪ್ರಮಥರು ಮೆಚ್ಚದೆ ನಗುವರು ಎಂದು ನುಡಿಯುತ್ತಾಳೆ. ಶಿವನು ನಿಜದೇವಿಯ ವಿರಕ್ತಿಯನ್ನು ನೋಡಿ ಪ್ರತ್ಯಕ್ಷನಾಗಿ, ನಿಜದೇವಿಯೆ ನಿನ್ನ ವೈರಾಗ್ಯಕ್ಕೆ ಮೆಚ್ಚಿದೆನು ನೀನು ದಿಗಂಬರಿಯಾಗದೆ ಈ ಬೊಂತೆಯನ್ನು (ಬೊಂತೆ ಎಂದರೆ ಕೌದಿ) ಹೊದ್ದುಕೊಂಡು ಹೋಗೆಂದು ಬೊಂತೆಯನ್ನು ಹೊದಿಸುತ್ತಾನೆ. ಶಿವನ ಅಪ್ಪಣೆ ಮೀರಲಾರದೆ ಆ ಕೌದಿಯನ್ನು ಹೊದ್ದುಕೊಂಡು ಬರುವಾಗಲೆ ನಿಜದೇವಿಗೆ ಬೊಂತಾದೇವಿ ಎಂಬ ಹೆಸರು ಬಂತೆಂದು ದಂತಕಥೆಯಲ್ಲಿ ಬರುತ್ತದೆ.

ಬೊಂತಾದೇವಿ ಕಲ್ಯಾಣಕ್ಕೆ ಬಂದು ಶರಣರ ಸಂಗದಲ್ಲಿ ಬೆರೆತು ಜೀವನ ಸಾಗಿಸುತ್ತಾಳೆ. ಅನುಭವ ಮಂಟಪದಲ್ಲಿ ಭಾಗಿಯಾದ ಬೊಂತಾದೇವಿಯು ಬಿಡಾಡಿ ಎಂಬ ವಚನಾಂಕಿತದಿಂದ ರಚಿಸಿದ ವಚನಗಳು ದೊರತದ್ದು ಐದು ಮಾತ್ರ. ಯಾವ ಬಂಧನಕ್ಕೂ ಒಳಗಾಗದ ಬೊಂತಾದೇವಿಯ ವಚನಗಳು ಬಯಲರೂಪಿ ಶಿವನನ್ನು ಸಂಕೇತಿಸುವುದರ ಜೊತೆಗೆ ಸ್ವಂತತ್ರ ಮನೋವೃತ್ತಿಯನ್ನು ಪ್ರತಿನಿಧಿಸುತ್ತವೆ. ಶಿವನ ಅನಂತತೆಯ ಸ್ವರೂಪ, ಆಧ್ಯಾತ್ಮಿಕ ಸಾಧನೆ, ಸಮತಾಭಾವ ಹಾಗೂ ಸಾಮಾಜಿಕ ಕಳಕಳಿಯಿಂದ ಕೂಡಿದವುಗಳಾಗಿವೆ. ಅವುಗಳಲ್ಲಿ ಬಯಲಿನ ಪರಿಕಲ್ಪನೆಯ ಪ್ರಮುಖವಾದ ವಚನವಿದಾಗಿದೆ.

ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?
ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆಬಯಲೆಂದುಂಟೆ?
ಎಲ್ಲಿ ನೋಡಿದಡೆ ಬಯಲೊಂದೆ;
ಭಿತ್ತಿಯಿಂದ ಒಳಹೊರಗೆಂಬ ನಾಮವೈಸೆ,
ಎಲ್ಲಿ ನೋಡಿದಡೆ ಕರೆದಡೆ ಓ ಎಂಬಾತನೆ ಬಿಡಾಡಿ.
-ಬೊಂತಾದೇವಿ

ದೇವರು ವಿಶ್ವ ಮತ್ತು ಸಮಾಜದೊಳಗಿನ ಸಕಲಜೀವಾತ್ಮರ ಆಂತರಿಕ ಸಂಬಂಧವನ್ನು ಹೊಂದಿರುವನೆಂಬುದು ಬೊಂತಾದೇವಿಯ ನಿಲುವಾಗಿದೆ. ಇಲ್ಲಿ ಬಯಲು ಎಂಬುದು ದೇವರು, ಬಾಹ್ಯಾಕಾಶ ಮತ್ತು ಸಮಾಜ ಎಂಬ ಮೂರು ಪ್ರಕಾರದಲ್ಲಿದೆ. ಈ ಬಯಲನ್ನು ವಿಜ್ಞಾನಿಗಳು ಆಕಾಶ, ಬಾಹ್ಯಾಕಾಶ ಮುಂತಾಗಿ ವಿಭಾಗಿಸುತ್ತಾರೆ. ಧಾರ್ಮಿಕವಾಗಿ ಈ ಬಯಲಿಗೆ ನಾನಾ ರೀತಿಯಾದ ದೇವರ ಹೆಸರುಗಳನ್ನು ಕೊಡುತ್ತಾರೆ. ವರ್ಣಭೇದ ನೀತಿಯ ಜನರು ಸಮಾಜವನ್ನು ಸವರ್ಣೀಯರು, ಅಸ್ಪೃಶ್ಯರು, ಕರಿಯರು, ಬಿಳಿಯರು ಮುಂತಾಗಿ ವಿಭಾಗಿಸುತ್ತಾರೆ. ಆದರೆ ಅನಂತನೂ ಲಯಕ್ಕೆ ಒಳಗಾಗದವನೂ ಆದಂಥ ದೇವರು ಬಯಲರೂಪಿಯಾಗಿದ್ದು ಎಲ್ಲವನ್ನೂ ಎಲ್ಲರನ್ನೂ ಒಳಗೊಂಡಿದ್ದಾನೆ. ಅವನಿಗೆ ಯಾವುದೇ ಕಟ್ಟುಪಾಡುಗಳಿಲ್ಲ. ಮಾನವ, ಮಾನವರ ಮಧ್ಯೆ ಅಡ್ಡಗೋಡೆ ಕಟ್ಟಿ, ಒಳಗೆ-ಹೊರಗೆ ಎಂದು ಹೆಸರಿಸುವುದು ಸರಿಯೇ ಎಂದು ಬೊಂತಾದೇವಿಯು ಪ್ರಶ್ನಿಸುತ್ತಾ ದೇವರು ಎಲ್ಲಡೆಯೂ ಇದ್ದಾನೆ. ಆದರೆ ಯಾವುದರಲ್ಲಿಯೂ ಸೀಮಿತವಾಗಿಲ್ಲದ ಬಿಡಾಡಿ. (ಬಿಡಾಡಿ ಎಂದರೆ ಯಾವುದೇ ಕಟ್ಟುಪಾಡುಗಳಿಲ್ಲದವನು.) ಎಲ್ಲಾ ಕಡೆಗಳಲ್ಲಿಯೂ ಇರುವ ದೇವರನ್ನು ಯಾರೇ ಆಗಲಿ ನಂಬಿ ಕರೆದರೆ ಓ ಎನ್ನುತ್ತಾನೆ ಎಂಬ ಆತ್ಮವಿಶ್ವಾಸದಿಂದ ಅಧ್ಯಾತ್ಮದ ತುದಿಗೇರಿದ ಬೊಂತಾದೇವಿಯ ಮನಸ್ಸು ಸಮತಾಭಾವ ಹಾಗೂ ಸಾಮಾಜಿಕ ಕಳಕಳಿಯಿಂದ ತುಂಬಿತ್ತು.

ಘಟದೊಳಗಣ ಬಯಲು, ಮಠದೊಳಗಣ ಬಯಲು,
ಬಯಲು ಬಯಲು ಬಯಲು !
ತಾನೆಲ್ಲಾ ಬಯಲು, ಬಿಡಾಡಿ ಬಯಲು.
-ಬೊಂತಾದೇವಿ

ಬೊಂತಾದೇವಿಯವರ ಬಯಲು ಶಬ್ದದ ಅನುರಣನ ಎಂತಹ ಮೊಹಕ! ಕಾವ್ಯ ಸೌಂದರ್ಯವನ್ನು ಕಾಣುವುದರೊಂದಿಗೆ ಪರಾತ್ಪರ ಪರಮಾತ್ಮನ ಒಳಗೊಂಡು, ಲಿಂಗಾಂಗ ಸಾಮರಸ್ಯ ಹೊಂದುವ ಅನುಭೂತಿಯೆಂಬಂತೆ ಬಯಲ ಗಳಿಕೆ ಮಾಡಿರುವುದು ಭಾಸವಾಗುತ್ತದೆ. ಸುಜ್ಞಾನವೆ ಮೈಗೂಡಿಸಿಕೊಂಡು ಅರಿವೆ ಗುರುವಾಗಿಸಿಕೊಂಡು ವಚನವೊಂದರಲ್ಲಿ ಅರಿವೆ ಬಿಡಾಡಿ, ಅರಿಯದೆ ಬಿಡಾಡಿ, ಮರವೆ ಬಿಡಾಡಿ, ಮರೆಯದೆ ಬಿಡಾಡಿ, ಅರಿವರಿ
ತು ಕುರುಹಿಲ್ಲದಾತ ನೀನೆ ಬಿಡಾಡಿ. ಸತ್ಯವೆಂಬದು ಯಾರ ಸೊತ್ತಲ್ಲ. ಅದು ನಾವು ಅರಿತರೂ, ಮರೆತರೂ ಅದು ಸದಾ ಕಾಲ ಇರುವುದು. ಯಾವ ಕುರುಹುವಿಲ್ಲದ ದೇವರು ಎಲ್ಲಾ ಕಡೆಗೂ ಅಗಮ್ಯ, ಅಗೋಚರ, ಅಪ್ರತಿಮನಾಗಿ ಇರುತ್ತಾನೆಂದು ಹೇಳುತ್ತಾ ಮತ್ತೊಂದು ಕಡೆ ಅಂತಾಯಿತ್ತಿಂತಾಯಿತ್ತೆಂತಾಯಿತ್ತೆನಬೇಡ, ಅನಂತನಿಂತಾತನೆಂದರಿಯಾ ಬಿಡಾಡಿ. ಈ ವಚನದಲ್ಲಿನ ಅಕ್ಷರಗಳನ್ನು ನೋಡಿದಾಗ, ಬೊಂತಾದೇವಿಯವರು ಎಷ್ಟು ಸಹಜವಾಗಿ ಅಕ್ಷರ ಪುನರಾವರ್ತನೆ ಮಾಡಿದ್ದು ಭಾಷಾಸಾಮರ್ಥ್ಯದ ಪ್ರತೀಕವಾಗಿದೆ. ’ಶಬ್ದವೆ ಬ್ರಹ್ಮ, ಶಬ್ದವೆ ಸಿದ್ಧ, ಶಬ್ದವೆ ಶುದ್ಧ ಕಾಣಿರೆ, ಬಿಡಾಡಿ. ಎಂದು ಬೊಂತಾದೇವಿಯವರ ಅನುಭವದಿಂದ ಬಂದ ನುಡಿಗಳು ಅವರ ಸಿದ್ಧಾಂತ ಮತ್ತು ಭಾಷಾ ಪ್ರಭುತ್ವವನ್ನು ಎತ್ತಿ ತೋರಿಸುತ್ತವೆ.

ಘಟಪಟನಾದಾ, ಓ ಎಂಬಾತ ಲಿಂಗ. ತರಗೆಲೆಗಳಿಗೊಂದೆ ಗಾಳಿ; ಹಾರುತ್ತಿಪ್ಪವು. ಒಂದೆ ಅನಿಲ, ನಿಂದ ದೇಹಪಟ್ಟೆಗಳೊಳಗೆಲ್ಲ. ಕರೆದಡೆ, ಓ ಎಂಬಾತನೆ ಬಿಡಾಡಿ. ಈ ವಚನದಲ್ಲಿ ಬೊಂತಾದೇವಿಯವರು ದೇಹದೊಳಗಿನ ಚೈತನ್ಯ ಬಯಲಾದ ನಂತರ ದೇಹವು ಒಣಗಿದ ಎಲೆಯಂತಾಗುವುದು. ಮಾನವ ದೇಹ ಮಣ್ಣಾಗುವ ಮುನ್ನ ಲಿಂಗದ ವಶದಲ್ಲಿ ಬೆಳಗುವವನೇ ಶರಣ. ಶರಣನ ಅಂಗಾಂಗಗಳು ಲಿಂಗದ ಜೊತೆ ಸಾಮರಸ್ಯ ಹೊಂದಿದ ಬಳಿಕ ’ನಾನು ತಾನು’ ಎಂಬುದರ ಕುರುಹಿಲ್ಲ. ಅಹಂ ಇಲ್ಲದ ಮಹಿಮರೇ ಶರಣರು. ಶರಣಸ್ಥಲದ ಸೀಮೆಗೆ ಹತ್ತಿರವಿರುವುದೇ ಐಕ್ಯಸ್ಥಲ.

ಕಲ್ಯಾಣದಲ್ಲಿ ಕಗ್ಗೊಲೆಯಿಂದಾಗಿ ಶರಣರೆಲ್ಲ ದಿಕ್ಕಾಪಾಲಾಗಿ ಚೆದರಿಹೋದರು. ಬೊಂತಾದೇವಿ ಕೊನೆಯವರೆಗೆ ಕಲ್ಯಾಣದಲ್ಲಿಯೇ ಉಳಿದು ಆ ಭಿಕರತೆಗೆ ಬೇಸತ್ತು ಶಿವನು ಕೊಟ್ಟ ಬೊಂತೆಯನ್ನು (ಕೌದಿ) ಆಕಾಶಕ್ಕೆ ತೂರುತ್ತಾಳೆ. ಅದು ಹಾರಾಡುತ್ತಾ ಬಯಲೊಳಗೆ ಬಯಲಾದಂತೆ ಪರಮವೈರಾಗ್ಯ ತಾಳಿದ ಬೊಂತಾದೇವಿಯ ಅಂಗದೊಳಗಿನ ಚೈತ್ಯನ್ಯವು ಲಿಂಗದೊಳಗೆ ಒಡಗೂಡಿ ಒಂದಾಯಿತು.
ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನಲ್ಲಿ ಮೊಳಕೇರಾ ಎಂಬ ಗ್ರಾಮವಿದೆ. ಇದು ಬಸವಲ್ಯಾಣದಿಂದ ೨೫ ಕಿ.ಮೀ. ಮತ್ತು ಹುಮನಾಬಾದ ಪಟ್ಟಣದಿಂದ ೫ ಕಿ.ಮೀ ದೂರದಲ್ಲಿ ಬರುವುದು. ರಾಷ್ರೀಯ ಹೆದ್ದಾರಿ ೯ರ iಗ್ಗಲಲ್ಲಿ ಬರುವ ಈ ಗ್ರಾಮದಲ್ಲಿ ಮೋಳಿಗೆ ಮಾರಯ್ಯನವರ ಮತ್ತು iಹಾದೇವಮ್ಮನವರ ಗವಿಗಳಿವೆ. ಮೋಳಿಗೆ ಮಾರಯ್ಯನವರ ಗವಿಯ ಎಡಗಡೆ iಹಾದೇವಮ್ಮನವರ ಮೂರ್ತಿ ಮತ್ತು ಗವಿಯಿದೆ. ಬಲಗಡೆಯಲ್ಲಿ ಒಂದು ಚಿಕ್ಕ ಕೋಣೆ ನಿರ್ಮಿಸಿ ಇತ್ತೀಚೆಗಷ್ಟೇ ಬೊಂತಾದೇವಿಯವರ ಒಂದು ಶಿಲಾಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಿದ್ದಾರೆ. ಕಾಶ್ಮೀರದಿಂದ ಬಂದಿರುವ ಮಹಾದೇವ ಭೂಪಾಲರ ಸಹೋದರಿಯೇ ನಿಜದೇವಿಯಾಗಿದ್ದು ಅವರೇ ಬೊಂತಾದೇವಿ ಇರಬಹುದೆಂಬ ನಂಬಿಕೆಗಳಿಂದ ಇಲ್ಲಿ ಬೊಂತಾದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎನ್ನತ್ತಾರೆ. ಆದರೆ ಇದುವರೆಗೂ ಮೋಳಿಗೆ ಮಾರಯ್ಯನವರ ಸಹೋದರಿಯೇ ಇವರು ಎಂಬುದಾಗಲಿ ಅಥವಾ ಅವರ ಐಕ್ಯಸ್ಥಳದಲ್ಲಿಯ ಸಮಾಧಿ(ಗದ್ದುಗೆ)ಯ ಬಗ್ಗೆಯಾಗಲಿ ನಿಖರವಾದ ಮಾಹಿತಿ ದೊರೆತಿಲ್ಲ. ಅದೇನೇ ಇದ್ದರೂ ಶರಣೆ ಬೊಂತಾದೇವಿ ತನ್ನ ಪ್ರಖರ ವೈಚಾರಿಕತೆ ಸಾರುವ ವಚನಗಳಲ್ಲಿ ಅಮರವಾಗಿದ್ದಾರೆ.

(ಕೃಪೆ: ಶರಣ ಮಾರ್ಗ, ಜುಲೈ-2020)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here