ಶಹಾಪುರ: ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಕ್ಸಲ್ ಜತೆ ಸಂಬಂಧ ಹೊಂದಿದ ಆರೋಪ ಹೊತ್ತಿರುವ ಜನಪರ ಕವಿ ಹೋರಾಟಗಾರ ವರವರರಾವ್ ಮುಂಬೈ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವರದಿ ಆತಂಕಕ್ಕೆ ಗುರಿ ಮಾಡಿದೆ. ತಕ್ಷಣವೇ ಅವರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ವೈಚಾರಿಕ ಚಿಂತಕ ಟಿ.ಶಶಿಧರ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮುಂಬಯಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕುತ್ತಿಲ್ಲ ಎಂಬುವುದು ತಿಳಿದು ಆಘಾತ ಆಗಿದೆ.ಅತ್ಯುತ್ತಮ ಚಿಕಿತ್ಸೆಗೆ ಮಹಾರಾಷ್ಟ್ರ ಸರ್ಕಾರ ತಕ್ಷಣ ವ್ಯವಸ್ಥೆ ಮಾಡಬೇಕು.ಜನಪರ ಕಾಳಜಿಗಳ ವರವರರಾವ್ ಮೇಲೆ ಆಪಾದನೆ ಏನೇ ಇರಲಿ ಅದನ್ನು ವಿಚಾರಣೆ ಮಾಡುವ ಬಗ್ಗೆ ನಮ್ಮ ತಕರಾರಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇಶದ ನ್ಯಾಯಾಂಗದ ಮೇಲೆ ನಮಗೆಲ್ಲಾ ಗೌರವ ಇದೆ. ವ್ಯಕ್ತಿಯ ಸೈದ್ಧಾಂತಿಕ ಹಿನ್ನೆಲೆ, ರಾಜಕೀಯ ಬದ್ಧತೆ ಏನೇ ಇದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಚಾರಣಾಧೀನ ಖೈದಿಯೂ ಸೇರಿದಂತೆ ಎಲ್ಲರ ಮಾನವ ಹಕ್ಕುಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯ. ಆರೋಗ್ಯ ಸುಧಾರಣೆ ಆಗುತ್ತಿದ್ದಂತೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ನಂತರ ಅವರ ವಿಚಾರಣೆಯನ್ನು ಮುಂದುವರಿಸಬಹುದಾಗಿದೆ. ವಯಸ್ಸು, ಆರೋಗ್ಯ ಇವುಗಳ ಹಿನ್ನೆಲೆಯಲ್ಲಿ ತುರ್ತಾಗಿ ಅವರಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಒದಗಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.