ಸುರಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾರಿಜಾತ ಗಿಡಿ ನೆಟ್ಟು ಶಿಲಾನ್ಯಾಸ ನೆರವೇರಿಸಿದ ಸಂದರ್ಭದಲ್ಲಿ ನಗರದ ಸೀತಾ ರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಆಚಾರ್ಯ ಪ್ರಾಣೇಶ ಕುಲಕರ್ಣಿಯವರ ನೇತೃತ್ವದಲ್ಲಿ ಶ್ರೀರಾಮ ಮತ್ತು ಸೀತಾ ಮಾತೆಯ ಮೂರ್ತಿಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.ಅಲ್ಲದೆ ಅನೇಕ ಜನ ರಾಮ ಭಕ್ತರು ಶ್ರೀರಾಮ ಜಪ ಮತ್ತು ಭಜನೆ ನಡೆಸಿ ಶಿಲಾನ್ಯಾಸಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಹಿರಿಯ ಮುಖಂಡ ಶ್ರೀಹರಿ ರಾವ್ ಆದ್ವಾನಿ ಮಾತನಾಡಿ,ಇಡೀ ಭಾರತದ ಸಮಸ್ತ ಹಿಂದುಗಳ ಐದು ಶತಮಾನದ ಕನಸಾಗಿದ್ದ ಶ್ರೀರಾಮ ಮಂದಿರ ನಿರ್ಮಾಣ ಇಂದು ನನಸಾಗುತ್ತಿದೆ.
ನಾವು ಹಿಂದೆ ಸುಮಾರು ೪೮ ಜನರು ಸುರಪುರದಿಂದ ಅಯೋಧ್ಯೆಗೆ ಹೋಗಿ ಬಾಬರಿ ಮಸೀದಿ ತೆರವಾಗಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕೆಂದು ಪ್ರಾರ್ಥಿಸಿದ್ದೆವು,ಅಂದಿನ ನೆನಪು ಇಂದು ಶಿಲನ್ಯಾಸದ ರೂಪದಲ್ಲಿ ಸಾರ್ಥಕತೆ ಕಾಣುತ್ತಿದೆ.ಇಂದು ಇಡೀ ಭಾರತೀಯರಿಗೆ ಎಲ್ಲಿಲ್ಲದ ಸಂತಸ ಮತ್ತು ಐತಿಹಾಸಿಕ ದಿನವಾಗಿದೆ.ಹಿಂದೆ ಸಿಕ್ಕ ಸ್ವಾತಂತ್ರ್ಯಕ್ಕಿಂತಲು ನಮಗೆ ಧಾರ್ಮಿಕ ಸ್ವಾತಂತ್ರ್ಯ ಇಂದು ದೊರೆತಿದೆ ಎನಿಸುತ್ತಿದೆ ಎಂದು ಭಾವನಾತ್ಮಕವಾಗಿ ನುಡಿದರು.
ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರ ಬಾಯಲ್ಲೂ ಕೇವಲ ರಾಮನಾಮ ಹಾಗು ರಾಮ ಭಜನೆಯ ಘೋಷ ಮಾತ್ರ ಕೇಳಿಸುವ ಮೂಲಕ ಎಲ್ಲರು ಸಂಭ್ರಮಿಸಿದರು.ಈ ಸಂದರ್ಭದಲ್ಲಿ ರಾಮ್ ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ,ಸಂದೀಪ ಜೋಷಿ,ಲಕ್ಷ್ಮೀಕಾಂತ ದೇವರಗೋನಾಲ,ಅಂಬ್ರೇಶ ಬೋವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.