ಸುರಪುರ: ಈಗಾಗಲೆ ದೇಶಾದ್ಯಂತ ಇದುವರೆಗೆ ಇದ್ದ ಕೋವಿಡ್-೧೯ ಲಾಕ್‌ಡೌನ್ ಬಹುತೇಕ ತೆರವುಗೊಂಡಿದ್ದು ಎಲ್ಲೆಡೆ ವ್ಯಾಪಾರ ವಹಿವಾಟು ಹಾಗು ವಾಹನಗಳ ಓಡಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.ಸರಕಾರಿ ಸಾರಿಗೆಯು ಆರಂಭಗೊಂಡಿದೆ,ಬಸ್ ನಿಲ್ದಾಣಗಳೂ ಕಾರ್ಯಾರಂಭಗೊಂಡಿವೆ.ಆದರೆ ಸುರಪುರ ಬಸ್ ನಿಲ್ದಾಣದಲ್ಲಿ ಇನ್ನೂ ಲಾಕ್‌ಡೌನ್ ಸಂಪೂರ್ಣವಾಗಿ ತೆರವಾಗಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಬಸ್ ನಿಲ್ದಾಣದಿಂದ ಮಹಾತ್ಮ ಗಾಂಧಿ ವೃತ್ತದ ಕಡೆಗೆ ಬರುವ ರಸ್ತೆಯ ಮುಖ್ಯ ದ್ವಾರವನ್ನು ಕಳೆದ ಎರಡು ತಿಂಗಳುಗಳ ಹಿಂದೆಯೆ ಬಂದ್ ಮಾಡಲಾಗಿದ್ದು ಇನ್ನೂ ಓಪನಾಗದಿರುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಕಳೆದ ತಿಂಗಳ ೧೯ ರಂದು ಸುರಪುರ ಬಸ್ ಡಿಪೋದಲ್ಲಿನ ಕೆಲ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಬಸ್ ಡಿಪೋ ಸೀಲ್‌ಡೌನ್ ಮಾಡಿ ಮೂರೆ ದಿನಕ್ಕೆ ಓಪನ್ ಮಾಡಲಾಯಿತು. ಆದರೆ ಬಸ್ ನಿಲ್ದಾಣದ ಮುಖ್ಯ ದ್ವಾರ ಬಂದ್ ಮಾಡಿದ್ದು ಇನ್ನೂ ತೆರವುಗೊಳಿಸಿಲ್ಲ.
ಇದೇ ದ್ವಾರದಿಂದಲೇ ಎಲ್ಲಾ ಬಸ್‌ಗಳು ಓಡಾಡುತ್ತಿದ್ದುದರಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಹೆಚ್ಚಿನ ಟ್ರಾಫಿಕ್ ಜಾಮ್ ಆಗುತ್ತಿರಲಿಲ್ಲ.ಆದರೆ ಈ ದ್ವಾರ ಬಂದ್ ಮಾಡಿದ್ದರಿಂದ ಎಲ್ಲಾ ಬಸ್‌ಗಳು ಮತ್ತು ಇತರೆ ಖಾಸಗಿ ವಾಹನಗಳು ಒಂದೇ ರಸ್ತೆಯ ಮೂಲಕ ಓಡಾಡುತ್ತಿರುವುದರಿಂದ ಮಹಾತ್ಮ ಗಾಂಧಿ ವೃತ್ತದಲ್ಲಿನ ಕಿರಿದಾದ ರಸ್ತೆಯಲ್ಲಿ ಎಲ್ಲಾ ವಾಹನಗಳು ಓಡಾಡುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿ ಕಂಡು ಬರುತ್ತಿದೆ.
ಆದ್ದರಿಂದ ಸಾರಿಗೆ ಇಲಾಖೆ ಕೂಡಲೆ ಬಸ್ ನಿಲ್ದಾಣದ ಮುಖ್ಯ ದ್ವಾರ ಬಂದ್ ಮಾಡಿದನ್ನು ತೆರವುಗೊಳಿಸಿ ಟ್ರಾಫಿಕ್ ಸಮಸ್ಯೆ ನಿವಾರಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾಳಪ್ಪ ಕಿರದಳ್ಳಿ ಆಗ್ರಹಿಸಿದ್ದಾರೆ.