ಆಶಾ-ಅಂಗನವಾಡಿ, ಬಿಸಿಯೂಟ ಸಿಬ್ಬಂದಿಗಳ ಪ್ರತಿಭಟನೆ

0
48

ವಾಡಿ: ಕೋವಿಡ್-೧೯ ಕೆಲಸದ ಮುಂಚೂಣಿ ಕೆಲಸಗಾರರಾಗಿ ತೊಡಗಿಸಿಕೊಂಡವರು ಯಾವುದೇ ಸ್ವರೂಪದಲ್ಲಿ ಸತ್ತರೂ ಅವರಿಗೆ ೫೦ ಲಕ್ಷ ರೂ. ವಿಮಾ ಸೌಲಭ್ಯ ಸಮಾನವಾಗಿ ನೀಡುವುದನ್ನು ಖಾತ್ರಿಪಡಿಸಬೇಕು. ಖಾಯಂ ಉದೋಗ ಕಲ್ಪಿಸಬೇಕು. ಇಡೀ ಕುಟುಂಬಕ್ಕೆ ಕೋವಿಡ್ ೧೯ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಸೌಲಭ್ಯ ಒದಗಿಸಬೇಕು. ಮಾಸಿಕ ರೂ.೨೧೦೦೦ ವೇತನ ಹಾಗೂ ವಾರ್ಷಿಕ ೧೦,೦೦೦ ಪಿಂಚಣಿ ಸೌಲಭ್ಯ ಒದಗಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗಾಗಿ ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತರು ಸರಕಾರವನ್ನು ಆಗ್ರಹಿಸಿದರು.

ಶುಕ್ರವಾರ ಪಟ್ಟಣದ ಶ್ರೀನಿವಾಸಗುಡಿ ವೃತ್ತದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕೊರೊನಾ ವಾರಿಯರ್ಸ್‌ಗಳು, ಸರಕಾರ ಬೇಡಿಕೆಗಳನ್ನು ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ವೇಳೆ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಜಂಟಿ ಕಾರ್ಯದರ್ಶಿ ಶರಣು ಹೇರೂರ, ಸಾಂಕ್ರಾಮಿಕ ರೋಗದ ಅಪಾಯಕಾರಿ ದಿನಗಳನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ರೋಗವನ್ನು ಹತೋಟಿಯಲ್ಲಿಡಲು ಶ್ರಮಿಸುತ್ತಿದ್ದಾರೆ. ಸುರಕ್ಷತಾ ಕ್ರಮಗಳನ್ನು ವಹಿಸಲು, ವಿಮೆ ಇತ್ಯಾದಿ ಸೌಲಭ್ಯ ಒದಗಿಸಲು, ಅಪಾಯಕಾರಿ ಕೆಲಸಕ್ಕೆ ಪರಿಹಾರ ಭತ್ಯೆ ಇತ್ಯಾದಿ ನೀಡಬೇಕೆಂದು ಕೇಂದ್ರ ಕಾರ್ಮಿಕರ ಸಂಘಟನೆಗಳು ಪದೇಪದೆ ಹೋರಾಟಗಳನ್ನು ನಡೆಸಿ, ಮನವಿ ನೀಡಿ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಮಂಡಿಸುತ್ತಲೇ ಬಂದಿವೆ. ಆದರೆ, ಭಾರತ ಸರ್ಕಾರವು ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಲೇ ಬರುತ್ತಿದೆ ಎಂದು ದೂರಿದರು.

ಮೂಲಭೂತ ಸೇವೆಗಳಾದ ಆರೋಗ್ಯ (ಆಸ್ಪತ್ರೆಯನ್ನೂ ಒಳಗೊಂಡು) ಪೋಷಕಾಂಶಗಳು (ಐಸಿಡಿಎಸ್, ಮಧ್ಯಾಹ್ನದೂಟ ಯೋಜನೆಯನ್ನೂ ಒಳಗೊಂಡು) ಮತ್ತು ಶಿಕ್ಷಣವೇ ಮುಂತಾದ ಅಗತ್ಯ ಮೂಲಭೂತ ಸೇವೆಗಳ ಖಾಸಗಿಕರಣದ ಪ್ರಸ್ತಾಪಗಳನ್ನು ಹಿಂಪಡೆಯಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಮತ್ತು ಸೇವೆಗಳ ಖಾಸಗಿಕರಣ ನಿಲ್ಲಿಸಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದೂಟ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಶನ್ (ಎನ್.ಎಚ್.ಎಂ) ಯೋಜನೆ ಮುಂತಾದ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಾಕಷ್ಟು ಬಜೆಟ್ ಅನುದಾನದ ಹಂಚಿಕೆಯನ್ನು ಮಾಡುವ ಜೊತೆಗೆ ಯೋಜನೆಗಳನ್ನು ಖಾಯಂ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ವೆಂಕನಗೌಡ ಪಾಟೀಲ ಸ್ವೀಕರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here