ಆಳಂದ: ಲಾಕಡೌನ್ ಸಂಕಷ್ಟಕ್ಕೆ ಒಳಗಾಗಿರುವ ನೇಕಾರ ಸಮುದಾಯದ ಬೆನ್ನಿಗೆ ಸರ್ಕಾರ ಸಹಾಯಹಸ್ತ ಚಾಚಲಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ತಾಲೂಕಿನ ಮಾದನ ಹಿಪ್ಪರ್ಗಾ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ನೇಕಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವದೇಶಿ ಆಂದೋಲನದ ಸಮಯದಲ್ಲಿ ಹೆಚ್ಚಾಗಿ ಸ್ವದೇಶಿ ಉತ್ಪನ್ನಗಳನ್ನು ಬಳಸುವ ನಿಟ್ಟಿನಲ್ಲಿ ರಾಷ್ಟ್ರೀಯ ನೇಕಾರ ದಿನಾಚರಣೆ ಆಚರಣೆಗೆ ತರಲಾಗಿದೆ ಎಂದು ನುಡಿದರು.
ಕೊರೋನಾ ಕಾರಣದಿಂದ ಕೆಲಸ ಕಳೆದುಕೊಂಡಿರುವ ರಾಜ್ಯದ ನೇಕಾರರಿಗೆ ಸಹಾಯಹಸ್ತ ನೀಡುವ ಸಲುವಾಗಿ ರಾಜ್ಯ ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದೆ ಮೊದಲ ಹಂತವಾಗಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿರುವ ನೇಕಾರರಿಗೆ ಈಗಾಗಲೇ ರಾಜ್ಯ ಸರ್ಕಾರದ ವತಿಯಿಂದ ೨ ಸಾವಿರ ಸಹಾಯಧನ ನೀಡಲಾಗಿದೆ ಮುಂದಿನ ದಿನಗಳಲ್ಲಿ ನಿಗಮದಲ್ಲಿ ಹೆಸರು ನೋಂದಾಯಿಸಿರುವ ನೇಕಾರರಿಗೆ ಮುಂದಿನ ದಿನಗಳಲ್ಲಿ ಪ್ರೋತ್ಸಾಹ ಸಿಗಲಿದೆ ಎಂದು ಭರವಸೆ ನೀಡಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಮುಖ್ಯಮಂತ್ರಿಗಳು ಕೂಡ ಈ ವಿಚಾರದಲ್ಲಿ ಹೆಚ್ಚಿನ ಮುತುರ್ವಜಿ ವಹಿಸಿದ್ದಾರೆ ಎಂದರು.
ಆಳಂದ ತಾಲೂಕಿನ ಆಳಂದ ಪಟ್ಟಣ, ಮಾದನ ಹಿಪ್ಪರ್ಗಾ ಮತ್ತು ಹಿರೋಳಿ ಗ್ರಾಮಗಳಲ್ಲಿ ಹೆಚ್ಚಿನ ಕುಟುಂಬಗಳು ನೇಕಾರಿಕೆಯನ್ನು ಅವಲಂಬಿಸಿ ಜೀವನ ನಿರ್ವಹಣೆ ಮಾಡುತ್ತಿವೆ ಅವರ ಕಲ್ಯಾಣಕ್ಕಾಗಿ ತಾವು ಬದ್ಧರಾಗಿದ್ದು ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಪ್ರಯತ್ನಿಸುತ್ತೇನೆ ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆದ ನೇಕಾರರ ಸಾಲ ಮನ್ನಾ ಆಗಿಲ್ಲ ಆದರೆ, ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಆಗಿದೆ ಈ ಕುರಿತು ಆಗಿರುವ ಲೋಪವನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ನೇಕಾರ ಸಮ್ಮಾನ ನಿಧಿ ಯೋಜನೆಯಡಿ ಸಹಾಯಧನ ಪಡೆದ ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾದನ ಹಿಪ್ಪರ್ಗಾದ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ನೇಕಾರ ಸಂಘದ ಅಧ್ಯಕ್ಷ ಮಲ್ಲಿನಾಥ ನಿಂಬಾಳ, ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಾ.ಪಂ ಸದಸ್ಯ ಸಾತಪ್ಪ ಕೊಳಶೆಟ್ಟಿ, ಕೈ ಮಗ್ಗ ಜವಳಿ ಇಲಾಖೆಯ ಉಪ ನಿರ್ದೇಶಕ ಕಾಶಿನಾಥ ಭಾವಿಕಟ್ಟಿ, ಮಲ್ಲಿಕಾರ್ಜುನ ತಡಕಲ, ಶಿವಪ್ಪ ಕೊಳಶೆಟ್ಟಿ, ಗುರುಶಾಂತ ಸೊನ್ನದ, ಸಿದ್ದಾರಾಮ ತೊಳನೂರ, ಮಲ್ಲಿನಾಥ ಚಿಂಚೋಳಿ, ಮಲ್ಲಿನಾಥ ಜುಂಜಾ, ಸಂತೋಷ ಚಾರಕಾಲನಿ, ಗಣೇಶ, ದೊಂಡಿಬಾ ಪೂಜಾರಿ ಸೇರಿದಂತೆ ಇತರರು ಇದ್ದರು.