ಕಲಬುರಗಿ: ಬೆಂಗಳೂರಿನ ಪೂರ್ವ ವಲಯದ ಪುಲಕೇಶಿನಗರದ ಶಾಸಕರ ಮನೆ, ಡಿ.ಜೆ.ಹಳ್ಳಿ ಪೋಲಿಸ್ ಠಾಣೆ ಮತ್ತು ಕೆ.ಜಿ.ಹಳ್ಳಿಯಹಲವೆಡೆ ಆಗಸ್ಟ್ 18 ರಂದು ನಡೆದಿರುವ ದಾಳಿಗಳನ್ನು ಹಾಗೂ ಅದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಫೇಸ್‌ಬುಕ್ ಅವಹೇಳನಕಾರಿ ಪೋಸ್ಟಿಂಗ್ ಅನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ), ಜಿಲ್ಲಾ ಸಮಿತಿಯ ಖಂಡಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೇಟ್ಟಿ ತಿಳಿಸಿದ್ದಾರೆ.
ಜನತೆಯು ಊಹಾಪೋಹಗಳಿಗೆ ಹಾಗೂ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡದೆ, ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ. ಪುಲಕೇಶಿನಗರದ ಶಾಸಕರಾದ ಶ್ರೀ ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಸಂಬಂಧಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಾಕಿರುವ ಅವಹೇಳನಕಾರಿ ಪೋಸ್ಟಿಂಗ್ಸ್ ಆಧರಿಸಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಪ್ರಚೋದನಕಾರಿ ಹೇಳಿಕೆಗಳಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆ ಅಗತ್ಯ ಕ್ರಮಗಳನ್ನು ಸಂಯಮದಿಂದ ಕೈಗೊಳ್ಳಬೇಕೆಂದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುತುವರ್ಜಿ ವಹಿಸಬೇಕೆಂದು ಸಿಪಿಐ(ಎಂ) ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಆ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಎಲ್ಲಾ ವ್ಯಕ್ತಿಗಳು, ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.