ಆಳಂದ: ಬೆಳಗಾವಿಯ ಪೀರನವಾಡಿಯ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಡ್ಡಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆ ಖಂಡಿಸಿ ತಾಲೂಕಿನ ನಿಂಬರ್ಗಾ ವಲಯದಲ್ಲಿ ಕ.ರ.ವೇ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್ರಾದ ಆರ್.ಮಹೇಶ್ ಮುಖಾಂತರ ಸಲ್ಲಿಸಿದ ಅವರು ಕರ್ನಾಟಕದ ಗಂಡು ಮೆಟ್ಟಿದ ನಾಡು ವೀರ ರಾಣಿ ಚೆನ್ನಮ್ಮ ಮತ್ತು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಜನ್ಮಭೂಮಿ ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಅನುಮತಿ ನಿರಾಕರಿಸುತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿಯ ಜಿಲ್ಲಾಡಳಿತ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ರಾಯಣ್ಣ ಸ್ವಾತಂತ್ರ್ಯ ಹೋರಾಟಗಾರ, ಕೆಚ್ಚೆದೆಯ ಕನ್ನಡಿಗ, ಆದರ್ಶವಾದಿ,ತಾಯಿ ನಾಡಿಗಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ ಅಪ್ರತಿಮ ದೇಶಭಕ್ತ.
ರಾಯಣ್ಣನ ಜನ್ಮಭೂಮಿಯಲ್ಲೇ ರಾಯಣ್ಣನ ಪ್ರತಿಮೆಗೆ ಅಧಿಕಾರಿಗಳು ಇಲ್ಲ ಸಲ್ಲದ ನೆಪ ನೀಡಿ ಅನುಮತಿ ನಿರಾಕರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು. ಅಲ್ಲಿನ ರಾಜಕಾರಣಿಗಳ ಈ ನಿರಾಭಿಮಾನದ ಸಂಚಿನ ಮೋಸಕ್ಕೆ ಕನ್ನಡಿಗರು ನಿರಂತರವಾಗಿ ಒಳಗಾಗುತ್ತಲೆ ಬಂದಿದ್ದಾರೆ. ಇಲ್ಲಿ ಕನ್ನಡವೇ ಸಾರ್ವಭೌಮ ಎನ್ನುವಂತಹ ಗಂಡೆದೆಯ ರಾಜಕಾರಣದ ಗಂಡಿನ ಅವಶ್ಯಕತೆ ಬೆಳಗಾವಿಯ ಜಿಲ್ಲೆಗಿದೆ ಎಂದರು.
ಪೀರನವಾಡಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಜಿಲ್ಲಾಡಳಿತವೇ ಯಾವುದೇ ಸಬೂಬು ನೀಡದೇ ಸ್ಥಾಪಿಸಬೇಕು. ತಾವು ಕೂಡಲೇ ಬೆಳಗಾವಿಯ ಜಿಲ್ಲಾಧಿಕಾರಿಗೆ ಸೂಚನೆ ನೀಡಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅನುವು ಮಾಡಿ ಕೊಡಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನಿಂಬರ್ಗಾ ವಲಯ ಕರವೇ ಅಧ್ಯಕ್ಷ ಬಸವರಾಜ ಯಳಸಂಗಿ,ಕ್ಷೇಮಲಿಂಗ ಕಂಭಾರ,ಮಡಿವಾಳಪ್ಪ ಮಡಿವಾಳ,ವಿನೋದಕುಮಾರ ಉಪಸ್ಥಿತರಿದ್ದರು.