ಬಸ್ ಪಾಸ್ ರಿಯಾಯಿತಿ ವಾಪಸ್: ಎಐಡಿಎಸ್‍ಒ ಆಕ್ರೋಶ

0
37

ವಾಡಿ: ಕೊರೊನಾ ಸಂಕಷ್ಟದ ಮಧ್ಯೆ ಬಸ್ ಪಾಸ್ ರಿಯಾಯಿತಿಯನ್ನು ಏಕಾಏಕಿ ಹಿಂಪಡೆದ ರಾಜ್ಯ ಸರಕಾರದ ದೋರಣೆಯನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‍ಒ) ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‍ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ, ಇಷ್ಟು ವರ್ಷಗಳ ಕಾಲ ನೀಡುತ್ತಿದ್ದ ಬಸ್ ಪಾಸ್ ರಿಯಾಯಿತಿಯನ್ನು ಕೊರೋನಾ ಸಮಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಹಿಂಪಡೆದಿರುವುದು ನಮ್ಮಲ್ಲಿ ಅಚ್ಚರಿ ಮತ್ತು ಆಘಾತ ಮೂಡಿಸಿದೆ. ರಾಜ್ಯದ ಜನತೆ ಲಾಕ್‍ಡೌನ್ ಪರಿಣಾಮದಿಂದ ಇನ್ನೂ ಚೇತರಿಸಿಕೊಂಡಿಲ್ಲ. ರಾಜ್ಯದ ಬಡ ರೈತರು, ಕಾರ್ಮಿಕರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.

Contact Your\'s Advertisement; 9902492681

ಇತ್ತೀಚಿನ ನೆರೆ ಹಾವಳಿಯಿಂದಾಗಿ ಸಹಸ್ರಾರು ರೈತರು ತಮ್ಮ ಜೀವನೋಪಾಯ ಕಳೆದುಕೊಂಡಿದ್ದಾರೆ. ಅನೇಕ ಬಡ ರೈತ-ಕಾರ್ಮಿಕರ ಮಕ್ಕಳು ಹಿಂದೆಂದಿಗಿಂತಲೂ ಹೆಚ್ಚಾಗಿ ಶಿಕ್ಷಣದ ಪರೀಧಿಯಿಂದ ಹೊರಬೀಳಲಿದ್ದಾರೆ. ಸರ್ಕಾರವು ಈ ವರ್ಷ ಇಂತಹ ಪ್ರಕ್ಷುಬ್ಧ ಪರಸ್ಥಿತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸಬೇಕಿತ್ತು. ಬದಲಾಗಿ ಶಿಕ್ಷಣ ನೀಡುವ ಜವಾಬ್ದಾರಿಯಿಂದ ಸರಕಾರ ಕೈಚೆಲ್ಲಿ ಕುಳಿತಿರುವುದು ಅತ್ಯಂತ ಖಂಡನೀಯ.

ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಿಷ್ಟ ಕಾಲೇಜು ಶುಲ್ಕವನ್ನೂ ಹೊಂದಿಸಲು ಪರದಾಡುತ್ತಿರುವ ಈ ಸಂದರ್ಭದಲ್ಲಿ ಬಸ್ ಪಾಸ್‍ನ ಸಂಪೂರ್ಣ ಹೊರೆಯನ್ನು ರಾಜ್ಯದ ವಿದ್ಯಾರ್ಥಿಗಳ ತಲೆಯ ಮೇಲೆ ಹಾಕಿರುವುದು ಜನವಿರೋಧಿ ನಿಲುವಾಗಿದೆ. ಬಸ್ ಪಾಸ್ ರಿಯಾಯಿತಿಯು ಹಲವಾರು ವರ್ಷಗಳ ಕಾಲ ವಿದ್ಯಾರ್ಥಿಗಳು ಹೋರಾಡಿ ರಕ್ಷಿಸಿಕೊಂಡ ಹಕ್ಕು. ಸರಕಾರ ವಿದ್ಯಾರ್ಥಿಗಳ ಈ ಪ್ರಜಾತಾಂತ್ರಿಕ ಹಕ್ಕಿನ ಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಸ್ ಪಾಸ್ ಹಿಂಪಡೆಯುವ ಈ ಅಪ್ರಜಾತಾಂತ್ರಿಕ ನಡೆಯನ್ನು ಸರಕಾರ ಕೂಡಲೇ ಹಿಂಪಡೆಯಬೇಕು. ರಿಯಾಯಿತಿ ಬಸ್ ಪಾಸ್‍ನ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಹೋರಾಟಕ್ಕೆ ಅಣಿಯಾಗಲು ವಿದ್ಯಾರ್ಥಿಗಳು ಮುಂದೆ ಬರಬೇಕು. ಸರಕಾರದ ಈ ವಿದ್ಯಾರ್ಥಿ ವಿರೋಧಿ ನಡೆಯನ್ನು ಖಂಡಿಸಿ, ರಿಯಾಯಿತಿ ಬಸ್ ಪಾಸ್‍ಗಾಗಿ ಆಗ್ರಹಿಸಿ ಸೆ.8 ರಂದು ರಾಜ್ಯವ್ಯಾಪಿ ಹೋರಾಟಕ್ಕೆ ಕರೆ ನೀಡಲಾಗಿದ್ದು, ವಿದ್ಯಾರ್ಥಿಗಳು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರತಿಕ್ರೀಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here