ಸುರಪುರ: ಕೊರೊನಾ ಜಗತ್ತನ್ನು ನಲುಗಿಸಿದ್ದು ಅದರ ಪರಿಣಾಮ ದಿಂದ ಕಳೆದ ಆರು ತಿಂಗಳಿಂದ ದೇಶದಲ್ಲಿನ ಎಲ್ಲಾ ಶಾಲಾ ಕಾಲೇಜುಗಳು ಬಂದ್ ಆಗಿದ್ದು.ಕರ್ನಾಟಕದಲ್ಲಿಯೂ ಶಾಲೆಗಳು ಬಂದಾಗಿದ್ದರಿಂದ ಮಕ್ಕಳು ಮನೆಯಲ್ಲಿಯೆ ಉಳಿದುಕೊಂಡಿವೆ,ಅಲ್ಲದೆ ಅನೇಕ ಬಡ ಕುಟುಂಬಗಳ ಮಕ್ಕಳು ಶಾಲೆಗೆ ಹೋಗದೆ ಪೋಷಕರೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.ಸುರಪುರ ತಾಲೂಕಿನಲ್ಲಿಯೂ ಅಂತಹ ಕೂಲಿ ಕೆಲಸಕ್ಕೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದೆ.ಇಂತಹ ಮಕ್ಕಳಿಗೆ ವಿದ್ಯಾ ದಾರಿ ಹಿಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಇಲ್ಲಿಯ ಅಕ್ಷರ ದಾಸೋಹ ಅಧಿಕಾರಿ.
ಮೌನೇಶ ಕಂಬಾರ ತಾಲೂಕು ಅಕ್ಷರ ದಾಸೋಹ ಅಧಿಕಾರಿಯಾಗಿ ಕೇವಲ ತಮ್ಮ ಇಲಾಖೆಯ ಕೆಲಸ ಮಾತ್ರವಲ್ಲದೆ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ರೀತಿಯ ಕಾರ್ಯಗಳನ್ನು ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಅದರಂತೆ ಈಗ ಕೋವಿಡ್-೧೯ ಸಂದರ್ಭದಲ್ಲಿ ಹೆತ್ತವರೊಂದಿಗೆ ಹೊಲಗಳಲ್ಲಿ ಕೆಲಸಕ್ಕೆ ಹೋಗುತ್ತಿರುವ ಮಕ್ಕಳನ್ನು ವಿದ್ಯಾಗಮದ ದಾರಿ ಹಿಡಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ.
ಶುಕ್ರವಾರ ಬೆಳಿಗ್ಗೆ ಬೀದರ ಬೆಂಗಳೂರು ಹೆದ್ದಾರಿಯ ಶಾಂತಪೂರ ಬಳಿಯಲ್ಲಿ ಪೋಷಕರೊಂದಿಗೆ ವಾಹನಗಳಲ್ಲಿ ಹೊಲದ ಕೆಲಸಕ್ಕೆ ತೆರಳುತ್ತಿದ್ದ ಮಕ್ಕಳನ್ನು ಕಂಡು ವಾಹನವನ್ನು ನಿಲ್ಲಿಸಿ ಮಕ್ಕಳನ್ನು ವಾಹನದಿಂದ ಇಳಿಸುವ ಜೊತೆಗೆ ಮಕ್ಕಳ ಪೋಷಕರಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸುವ ಜೊತೆಗೆ ವಾಹನದಲ್ಲಿನ ಮಕ್ಕಳಿಗೆ ವಠಾರ ಶಾಲೆ ಮತ್ತು ವಿದ್ಯಾಗಮ ಶಾಲೆಗಳ ಬಗ್ಗೆ ತಿಳಿಸುವ ಜೊತೆಗೆ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡುವ ಮೂಲಕ ಮಕ್ಕಳು ವಠಾರ ಶಾಲೆಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ.ಅಲ್ಲದೆ ವಾಹನದಲ್ಲಿ ಕರೆದೊಯ್ಯುತ್ತಿದ್ದ ಚಾಲಕನಿಗೂ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯ ಎನ್ನುವ ಬಗ್ಗೆ ತಿಳಿ ಹೇಳಿ ಈ ಮುಂದೆ ಕಲಿಯುವ ಮಕ್ಕಳು ಕೆಲಸಕ್ಕೆಂದು ಬಂದಲ್ಲಿ ವಾಹನದಲ್ಲಿ ಹತ್ತಿಸಿಕೊಳ್ಳದೆ ಶಾಲೆಗೆ ಹೋಗುವಂತೆ ತಿಳಿಸುವಂತೆ ಜಾಗೃತಿ ಮೂಡಿಸಿದ್ದಾರೆ.
ಕೆಲಸಕ್ಕೆ ಹೊರಟಿದ್ದ ಹತ್ತಕ್ಕು ಹೆಚ್ಚು ಚಿಕ್ಕ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಹೆತ್ತವರಲ್ಲಿ ಜಾಗೃತಿ ಮೂಡಿಸುವ ಮೂಲಕ ಮನವೊಲಿಸಿದ್ದರಿಂದ ಪೋಷಕರು ಕೂಡ ಮಕ್ಕಳು ವಠಾರ ಶಾಲೆಗೆ ಕಳುಹಿಸಲು ಒಪ್ಪಿರುವ ಜೊತೆಗೆ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.