ಕಲಬುರಗಿ: ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸುವ ಮೂಲಕ ಅವರನ್ನು ಉತ್ತೇಜಿಸುವ ಕಾರ್ಯ ಸಮಾಜದ ನೌಕರ ಬಾಂಧವರು ಹಮ್ಮಿಕೊಂಡಿರುವುದು ಪ್ರೋತ್ಸಾಹದಾಯಕ ಕಾರ್ಯ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ವತಿಯಿಂದ ಎಸ್.ಎಸ್.ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸಂಘಟನೆ ಮಾಡುವ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಕಲಬುರಗಿ ಬೀದರ್ ಜಿಲ್ಲೆಯ ಆಳೂರು ಹಾಗೂ ಚಳಕಾಪುರ ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಪ್ರೋತ್ಸಾಹ ನೀಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಅಂದಾಗ ಮಾತ್ರ ಮಕ್ಕಳು ಸರ್ವಾಂಗೀಣ ವ್ಯಕ್ತಿತ್ವ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು. ನವದೆಹಲಿಯ ಮಹಾಂತ ದೇವರು ನೇತೃತ್ವ ವಹಿಸಿದ್ದರು.
ವಿಜಯಪುರ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ, ಮಾಜಿ ಶಾಸಕ ರಮೇಶ ಭೂಸನೂರ, ಅಖಿಲ ಭಾರತ ಗಾಣಿಗ ಸಂಘದ ಅಧ್ಯಕ್ಷ ಗುರಣ್ಣ ಜಿ. ಗೋಡಿ, ರಾಜ್ಯಾಧ್ಯಕ್ಷ ಆರ್.ಜಿ. ಪಾಟೀಲ, ಜಿಲ್ಲಾ ಗಾಣಿಗ ಸಮಾಜದ ಅಧ್ಯಕ್ಷ ಅಪ್ಪಾರಾವ ಪಾಟೀಲ, ಯಾದಗಿರಿ ಜಿಲ್ಲಾ ಗಾಣಿಗ ನೌಕರರ ಸಂಘದ ಅಧ್ಯಕ್ಷ ಮಡಿವಾಳಪ್ಪ ಪಾಟೀಲ, ವಿಜಯಪುರ ಜಿಲ್ಲಾಧ್ಯಕ್ಷ ಮಲ್ಕಣ್ಣ ಎಸ್. ಮೊಸಲಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಸಂಘದ ಜಿಲ್ಲಾಧ್ಯಕ್ಷ ಸಂಗನಗೌಡ ಪಾಟೀಲ ಕಲ್ಲೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರುಗಳು, ಸಮಾಜ ಬಾಂಧವರು ಹೆಚ್ಷಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.