ಮತ್ತೆ ಉಕ್ಕಿತು ಹಳ್ಳ: ಬಳವಡಗಿ ಗ್ರಾಮ ನೀರಿನಲ್ಲಿ..!

0
54

ವಾಡಿ: ಗುಡುಗುತ್ತಿರುವ ಮೋಡ, ಸುರಿಯುತ್ತಿರುವ ಮಳೆ ಬಳವಡಗಿ ಗ್ರಾಮಸ್ಥರ ನೆಮ್ಮದಿ ಕಸಿದಿವೆ. ಸಂಜೆ ವೇಳೆ ಮುಗಿಲಲ್ಲಿ ಮೋಡಗಳು ಕಾಣದಿದ್ದರೆ ಮಾತ್ರ ಈ ಊರಿನ ಜನರಿಗೆ ಸುಖದ ನಿದ್ರೆ. ಗುಡುಗು ಮಿಂಚು ಕಾಣಿಸಿಕೊಂಡರೆ ಕುಟುಂಬ ಸಮೇತ ಇಡೀ ರಾತ್ರಿ ಜಾಗರಣೆ. ಮಳೆಯ ರೌದ್ರಾವತಾರ ಉಕ್ಕಿಸುತ್ತಿರುವ ಪ್ರವಾಹ ಬಡ ಕುಟುಂಬಗಳ ಜೀವ ಹಿಂಡುತ್ತಿರುವುದು ಮಾತ್ರ ಕಟುವಾಸ್ತವ.

ಮಳೆಯ ಆರ್ಭಟ ಮುಂದುವರೆದಿದ್ದು, ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮ ಮತ್ತೆ ಜಲಾವೃತಗೊಂಡಿದೆ. ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೊಂಚೂರು ಮತ್ತು ಬಳವಡಗಿ ಮಧ್ಯೆ ಹರಿಯುತ್ತಿರುವ ಹಳ್ಳ ಉಕ್ಕೇರಿದೆ. ಕೊಂಚೂರು-ವಾಡಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡರೆ, ಐತಿಹಾಸಿಕ ಏಲಾಂಬಿಕೆ ದೇವಸ್ಥಾನ ಇರುವ ಬಳವಡಗಿ ಗ್ರಾಮದಲ್ಲಿ ಪ್ರವಾಹ ಸಂಕಷ್ಟ ಸೃಷ್ಠಿಯಾಗಿದೆ. ರಭಸದಿಂದ ಹರಿಯುತ್ತಿರುವ ಹಳ್ಳದ ನೀರು ಊರೊಳಗೆ ಹರಡಿ ನೂರಾರು ಬಡ ಕುಟುಂಬಗಳ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಕಂಡುಬಂದಿತು.

Contact Your\'s Advertisement; 9902492681

ಏಲಾಂಬಿಕೆ ದೇವಸ್ಥಾನ ಮತ್ತು ಪರಿಶಿಷ್ಟ ಜನಾಂಗದ ಬಡಾವಣೆಯ ಮನೆಗಳು ಅಕ್ಷರಶಃ ನೀರಿನಲ್ಲಿ ನಿಂತು ಬದುಕು ದುಸ್ಥರಗೊಳಿಸಿತು. ಹಳ್ಳದ ಮೇಲಿಂದ ಅಪಾಯಕಾರಿ ರಸ್ತೆ ದಾಟಲು ವಾಹನ ಸವಾರರು ಪರದಾಡಿದರು. ಜನರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಸುರಕ್ಷಿತ ಸ್ಥಳಕ್ಕೆ ಬಂದು ಆಸರೆಗಾಗಿ ಪರದಾಡಿದರು. ಕೂಡಿಟ್ಟ ದವಸದಾನ್ಯಗಳು ನೀರುಪಾಲಾಗಿ ಹೊಟ್ಟೆಗೆ ಹಿಟ್ಟಿಲ್ಲದಂತೆ ಮಾಡಿತು.

ವಾಡಿ ನಗರದಿಂದ ಬಳವಡಗಿ ಗ್ರಾಮ ಪ್ರವೇಶಕ್ಕೆ ಯಾವೂದೇ ಮಾರ್ಗಗಳು ಇಲ್ಲದಷ್ಟು ಪ್ರವಾಹ ಆವರಿಸಿಕೊಂಡಿತ್ತು. ಶನಿವಾರ ಸಂಜೆ ವರೆಗೂ ಪ್ರವಾಹ ಏರುತ್ತಲೇಯಿತ್ತು. ಪದೇಪದೆ ಈ ಗ್ರಾಮ ಪ್ರವಾಹದ ಹೊಡೆತಕ್ಕೆ ತುತ್ತಾಗುತ್ತಿದ್ದು, ಇಲ್ಲಿನ ಜನರ ಬದುಕಿಗೆ ಶಾಸ್ವತ ಪರಿಹಾರ ಇಲ್ಲದಂತಾಗಿರುವುದು ಮಾತ್ರ ವಿಪರ್ಯಾಸ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here