ಸುರಪುರ: ಕಲ್ಯಾಣ ಕರ್ನಾಟಕ ಪರವಾನಗಿ ಭೂಮಾಪಕರ ಸಂಘದಿಂದ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ಸ್ವಾಮಿತ್ವ ಯೋಜನೆಯಡಿ ಭೂಮಾಪನಕ್ಕೆ ಸುರಪುರ ಮತ್ತು ಹುಣಸಗಿ ತಾಲೂಕಿನ ಪರವಾನಗಿ ಭೂಮಾಪಕರನ್ನು ನಿಯೋಜಿಸದಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶ್ರೀಕಾಂತ ನಿಂಬೂರ ಮಾತನಾಡಿ,ಪರವಾನಗಿ ಭೂಮಾಪಕರು ೨೦೦೦ನೇ ಇಸ್ವಿಯಿಂದ ಇಲ್ಲಿಯವರೆಗೂ ಭೂಮಾಪನ ಇಲಾಖೆಯಲ್ಲಿ ಮೇಲಾಧಿಕಾರಿಗಳು ಕಾಲ ಕಾಲಕ್ಕೆ ಆದೇಶ ಮಾಡಿದಂತೆ ಎಲ್ಲಾ ತರಹದ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ,ಆದರೆ ಸರಕಾರ ಪರವಾನಗಿ ಭೂಮಾಪಕರಿಗೆ ಯಾವುದೇ ಸೇವಾ ಭದ್ರತೆ ನೀಡಿರುವುದಿಲ್ಲ.
ಈ ಹಿಂದೆ ಪೋಡಿ ಮುಕ್ತ ಯೋಜನೆ ಅಭಿಯಾನದಲ್ಲಿಯೂ ಪರವಾನಗಿ ಭೂಮಾಪಕರು ಅಳತೆ ಮಾಡಿ ದಾಖಲೆಗಳನ್ನು ತಯಾರಿಸಿ ದುರಸ್ತಿಪಡಿಸಿ ಸಕಾಲದಲ್ಲಿ ಕಚೇರಿಗೆ ಸಲ್ಲಿಸಿದ್ದೇವೆ.ಆದರೆ ಹಲವಾರು ತಿಂಗಳುಗಳಾದರು ಇದಕ್ಕೆ ಸಂಬಂಧಿಸಿದ ಸಂಭಾವನೆ ಹಣವನ್ನು ಇನ್ನೂ ನೀಡಿರುವುದಿಲ್ಲ.ಈಗ ಮತ್ತೆ ಸ್ವಾಮಿತ್ವ ಯೋಜನೆ ಆರಂಭಿಸುತ್ತಿದ್ದು ಈ ಯೋಜನೆಗೆ ಪರವಾನಗಿ ಭೂಮಾಪಕರನ್ನು ನೀಯೋಜಿಸಿದರೆ ಸದ್ಯದ ಪರಸ್ಥಿತಿಯಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟದಾಯಕವಾಗಿದೆ.ಆದ್ದರಿಂದ ಸ್ವಾಮಿತ್ವ ಯೋಜನೆಯಡಿ ಭೂಮಾಪನಕ್ಕೆ ಪರವಾನಗಿ ಭೂಮಾಪಕರನ್ನು ನಿಯೋಜಿಸದಂತೆ ವಿನಂತಿಸುವುದಾಗಿ ತಿಳಿಸಿ ನಂತರ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಾಂತಕುಮಾರ ಕವಲಿ ಜಿಲ್ಲಾ ಗೌರವಾಧ್ಯಕ್ಷ ಕೆ.ಸಿ ವಿಶ್ವನಾಥ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಹಡಪದ ಜಿಲ್ಲಾ ಕಾರ್ಯದರ್ಶಿ ಪಿ.ಕೆ ರೇವಣ್ಣ ಖಜಾಂಚಿ ಪ್ರಭುಗೌಡ ಪಾಟೀಲ್ ಸೇರಿದಂತೆ ಅನೇಕರಿದ್ದರು.