ಆಳಂದ: ಕೊವಿಡ್ ರೋಗದ ಬಗ್ಗೆ ಯಾರು ಅಸಡ್ಡೆ ತಾಳಬಾರದು ಆದರೆ ಅದರ ಕುರಿತು ಹೆಚ್ಚಿನ ಜಾಗೃತಿವಹಿಸುವುದು ಅವಶ್ಯಕವಾಗಿದೆ ಎಂದು ವಿಕೆಜಿ ಪದವಿ ಕಾಲೇಜಿನ ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಅಭಿಪ್ರಾಯಪಟ್ಟರು.
ಆಳಂದ ಪಟ್ಟಣದ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಸ್ಥಾಪನಾ ದಿನಾಚಾರಣೆಯ ಅಂಗವಾಗಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಹಾಗೂ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಲಾಕಡೌನ್ ಸಮಯದಲ್ಲಿ ಕರೋನಾ ಮಹಾಮಾರಿಯು ಸಾಕಷ್ಟು ಜನರ ಜೀವ ಹಿಂಡಿದೆ ಇದರಿಂದ ಹಲವಾರು ಜನ ಉದ್ಯೋಗ ವಂಚಿತರಾಗಿದ್ದಾರೆ ಈ ಹಿನ್ನೆಲೆಯಲ್ಲಿ ಕರೋನಾ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಾನೂನಿನ ಪ್ರಕಾರ ಮಹಾ ಅಪರಾಧವಾಗಿದೆ ಅದರ ಕುರಿತು ಅರಿವು ಮೂಡಿಸುವುದು ನಮ್ಮ ಆದ್ಯತೆಯಾಗಬೇಕೆಂದು ಕರೆ ನೀಡಿದರು.
ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ರಾಜಕುಮಾರ ಬಡಿಗೇರ ಮಾತನಾಡಿ, ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ನಿಯಮಾವಳಿಗಳನ್ನು ನಾಗರಿಕರಾದ ನಾವೇಲ್ಲ ಚಾಚು ತಪ್ಪದೇ ಪಾಲಿಸಬೇಕು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿಠ್ಠಲ ಕೋರೆ, ಡಾ.ಖಂಡಪ್ಪ ವಗ್ಗಿ, ಅಂಬರೀಶ ಕಂಬಾರ, ಸಂತೋಷ ಸಲಗರೆ, ಕಲ್ಯಾಣಿ ಪೂಜಾರಿ, ರತನಕುಮಾರ ಮಾಂಜರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.