ರಂಜಾನ್ ಹಬ್ಬ; ನಿಮಗೆಷ್ಟು ಗೊತ್ತು..?

0
347

ಇಸ್ಲಾಂ ಧಾರ್ಮಿಕ ನಂಬಿಕೆ ಪ್ರಕಾರ ರಂಜಾನ್ ಅನ್ನೋದು ಪವಿತ್ರ ತಿಂಗಳು. ಇಸ್ಲಾಂ ಧರ್ಮ ಗ್ರಂಥ `ಖುರಾನ್’ ಅವತೀರ್ಣಗೊಂಡ ತಿಂಗಳು. ಈ ರಂಜಾನ್ ತಿಂಗಳಲ್ಲಿ ಮೂವತ್ತು ದಿನವೂ ಶ್ರದ್ಧೆ, ಭಕ್ತಿಯಿಂದ ಉಪವಾಸ ಕೊರೋದು ಒಂದು ಸಂಪ್ರದಾಯ. ಶ್ರೀಮಂತನಿಗೂ ಹಸಿವಿನ ದಣಿವಾಗಬೇಕು. ಗಂಟಲು ನೀರಿಲ್ಲದೆ ಬತ್ತ ಬೇಕು. ಈ ಮೂಲಕ ದಾನ ಧರ್ಮಗಳ ಮಹತ್ವ ಸಾರುತ್ತೆ ರಂಜಾನ್. ಒಳ್ಳೆಯ ಕಾರ್ಯಗಳನ್ನಷ್ಟೇ ಮಾಡುತ್ತಾ, ಮೂವತ್ತು ದಿನವೂ ಉಪವಾಸವಿದ್ದು ಅಲ್ಲಾಹನ ಮುಂದೆ ಕೂತು ಕೈಚಾಚಿ ಜೀವನ ಪ್ರಾಪ್ತಿಗಾಗಿ ಬೇಡಿಕೊಳ್ಳೋದು. ಇದನ್ನ ಮೊಹಮ್ಮದ್ ಪೈಗಂಬರ್ ಕೂಡ ಹೇಳಿದ್ದಾರೆ. ಇದೇ ಕಾರಣಕ್ಕೆ ವರ್ಷದಲ್ಲಿ ಒಂದು ತಿಂಗಳ ಕಾಲ ಈ ರೀತಿ ಕಳೆಯೋದು ಆದ್ಯಾತ್ಮದ ಅನುಭವ ಎಂದೇ ಕರೆಯಲಾಗುತ್ತೆ. ಈ ರಂಜಾನ್ ತಿಂಗಳು ಬಂತೆಂದರೆ ಸಾಕು ಮುಸ್ಲಿಮರ ಮನೆ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿರುತ್ತವೆ. ಹೊರಗಿಂದ ನೋಡುವವರಿಗೆ ಇದೊಂದು ಕಠಿಣ ವ್ರತ ಅಂತನಿಸಿದರು, ಕಾಲಾಕಾಲಗಳಿಂದ ಮಾಡಿಕೊಂಡು ಬರುತ್ತಿರೋದ್ರಿಂದ ಮುಸ್ಲಿಮರಿಗೆ ಇದು ಅತ್ಯಂತ ಸುಲಭದ ಕಾರ್ಯ. ಜೊತೆಗೆ ಒಂದಿಡೀ ತಿಂಗಳು ಅಲ್ಲಾಹನ ಜೊತೆಗಿನ ಸಂಭಾಷಣೆಯಲ್ಲಿ ತೊಡಗಿಕೊಳ್ಳೋದು. ಹೀಗೆ ಒಂದು ತಿಂಗಳ ನಿರಂತರ ಸಂಭಾಷಣೆಯ ಕೊನೆಯಲ್ಲಿ ರಂಜಾನ್ ಹಬ್ಬ ಆಚರಿಸಿಕೊಂಡು ಮುಸ್ಲಿಮರು ಸಂಭ್ರಮಿಸುತ್ತಾರೆ.

Contact Your\'s Advertisement; 9902492681

ಅರ್ಧ ಚಂದ್ರ ದರ್ಶನ; ರಂಜಾನ್ ಹಬ್ಬ ಆಚರಣೆ

ಹೌದು, ಮುಸಲ್ಮಾನರ ಪಾಲಿಗೆ ಮಹತ್ವದ ಹಬ್ಬ ರಂಜಾನ್. ಸೌಹಾರ್ದತೆ ಹಾಗೂ ಸಾಮರಸ್ಯದ ಕುರುಹಾಗಿರುವ ಈ ಹಬ್ಬದ ಹಿಂದೆ ಹಲವು ವಿಶೇಷತೆಗಳಿವೆ. ಮೂವತ್ತು ದಿನವಿಡೀ ಉಪವಾಸ ಹಿಡಿದು. ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿ, ಅರ್ಧ ಚಂದ್ರ ಕಾಣಿಸಿಕೊಂಡಾಗ ಈ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಸೂರ್ಯ ಉದಯಿಸುವ ಮುನ್ನ ಉಪವಾಸ ವ್ರತ ಶುರುವಾಗಿ ಸೂರ್ಯ ಅಸ್ತಮಿಸೋ ಸಮಯ ಉಪವಾಸಕ್ಕೆ ತೆರೆ ಬೀಳುತ್ತೆ. ಹೀಗೆ ಮೂವತ್ತು ದಿನಗಳ ಕಾಲ ಶ್ರದ್ಧೆ ಭಕ್ತಿಯಿಂದ ಇಡೀ ಮುಸ್ಲಿಂ ಸಮುದಾಯ ಒಂದು ಮಾಹೆಯ ಉಪವಾಸದಲ್ಲಿರುತ್ತಾರೆ. ಇಲ್ಲಿ ಬಡವನಿಗೂ, ಶ್ರೀಮಂತನಿಗೂ ಒಂದೇ ರೀತಿಯ ರೀತಿ ರಿವಾಜುಗಳು. ಪ್ರಾಯಕ್ಕೆ ಬಂದಿರುವ ಎಲ್ಲರೂ ಕೂಡ ಉಪವಾಸ ಇರತಕ್ಕದ್ದು. ಆದರೆ ಹೆಂಗಸರು ಅನಿವಾರ್ಯಾ ಕಾರಣಗಳಿಂದ ಉಪವಾಸವನ್ನ ಕೈ ಬಿಡುವ ಅವಕಾಶವೂ ಇಲ್ಲಿದೆ. ಈ ಒಂದು ತಿಂಗಳ ಕಾಲ ಮುಸಲ್ಮಾನರು ಆಧ್ಯಾತ್ಮಿಕ ಅನುಭವವನ್ನ ಧಕ್ಕಿಸಿಕೊಳ್ಳುವ ಹಾದಿಯಲ್ಲಿರುತ್ತಾರೆ. ಜೊತೆಗೆ, ರಂಜಾನ್ ಉಪವಾಸ ಎಂದರೆ ಶ್ರೀಮಂತನಿಗೂ ಹಸಿವಿನ ಆಗಾಧತೆಯ ಅರಿವಾಗಲಿ ಅನ್ನೋ ಒಂದು ಹುರುಳೂ‌ ಇಲ್ಲಿದೆ. ಈ ಮೂಲಕ‌ ಉಳ್ಳವನು ಇಲ್ಲದವನಿಗೆ ದಾನ ಧರ್ಮ ಮಾಡಲು ಈ ರಂಜಾನ್ ಸಾರುತ್ತದೆ.

ರಂಜಾನ್ ಎಂದರೆ ದಾನ ಧರ್ಮ.!!

ರಂಜಾನ್ ಎಂದರೆ ಕೇವಲ ಮೂವತ್ತು ದಿನಗಳ ಕಾಲ‌ ಉಪವಾಸ ಕೂತು ಕೊನೆಗೊಂದು ದಿನ ಹಬ್ಬ ಮಾಡಿ ಸಂಭ್ರಮಿಸುವ ಸಂಪ್ರದಾಯವಲ್ಲ. ಈ ರಂಜಾನ್ ಎಂದರೆ ದಾನ ಧರ್ಮ ಮಾಡಲಿರುವ ಸೂಕ್ತ ಸಮಯ. ಮುಸಲ್ಮಾನರ ನಡುವೆ ಒಂದು ನಂಬಿಕೆ ಇದೆ. ಈ ರಂಜಾನ್ ತಿಂಗಳಿನಲ್ಲಿ ಅಲ್ಲಾಹನಿಗೆ ಇಷ್ಟದ ಒಂದು ಕೆಲಸ ಮಾಡಿದರೆ ಅದಕ್ಕೆ ಅಲ್ಲಾಹುವು ಎಪ್ಪತ್ತು ಒಳ್ಳೆಯ ಕೆಲಸದ ಪ್ರತಿಫಲ ನೀಡುವನು ಅನ್ನೋದು. ಇದೇ ಕಾರಣಕ್ಕೆ ರಂಜಾನ್ ತಿಂಗಳಿನಲ್ಲಿ ಹೆಚ್ಚಿನ ಮುಸಲ್ಮಾನರು ವೈಭೋಗವ ಮರೆತು ಧಾರ್ಮಿಕತೆಯ ಸುತ್ತಲೇ ಇರುತ್ತಾರೆ.‌ ಇನ್ನೂ ಕೆಲವರು ಅನಿವಾರ್ಯವಾಗಿ ಇದರಿಂದ ದೂರ ಉಳಿಯುವವರು ಇದ್ದಾರೆ. ಆದರೆ‌ ಇಲ್ಲಿ ಯಾವುದೇ ಹೇರಿಕೆ ಇಲ್ಲ. ಇದು ಈಮಾನಿನ ಒಂದು ಭಾಗವೇ ಆಗಿದೆ.

ರಂಜಾನ್ ತಿಂಗಳು ಬಡವರಿಗೆ ನೆರವಾಗಲು ಸೂಚಿಸುತ್ತದೆ. ದಾನ (ಝಕಾತ್) ಮಾಡೋದು ಈ ತಿಂಗಳ‌ ಮಹತ್ವಕ್ಕೆ ಹಿಡಿದಿರುವ ಕೈಗನ್ನಡಿ. ಝಕಾತ್ ಕೊಡೋದಕ್ಕೂ ನೀತಿ‌ ನಿಯಮಗಳು ಇದೆ. ಓರ್ವ ಶ್ರೀಮಂತ ತನ್ನ ಸಂಪತ್ತಿನ ಶೇ.2.5 ರಷ್ಟು ಸಂಪತ್ತನ್ನು ಈ ರಂಜಾನ್ ತಿಂಗಳಿನಲ್ಲಿ ದಾನ ಮಾಡಲೇ ಬೇಕು. ಇಲ್ಲದೆ ಹೋದರೆ ಅದು ಹರಾಮ್ ಆಗಿರುವ ಸಂಪತ್ತು ಅನ್ನೋ ನಂಬಿಕೆಯೂ ಇದೆ. ಆದರೆ ಝಕಾತ್ ಕೊಡಬೇಕು ಅನ್ನೋ ಕಾರಣಕ್ಕೆ ಬೇಕಾ ಬಿಟ್ಟಿ ಝಕಾತ್ ಹಂಚುವಾಗಿಲ್ಲ. ಝಕಾತನ್ನ (ದಾನ) ಅರ್ಹರಿಗೆ ತಲುಪಿಸಬೇಕು. ಯಾರು ಝಕಾತ್ ಪಡೆಯಲು ಅರ್ಹರಿದ್ದಾರೋ ಅಂತವರಿಗೇ ಝಕಾತ್ ತಲುಪಬೇಕು. ಇನ್ನೊಂದು ವಿಚಾರ, ಪಕ್ಕದ ಮನೆ ಒಲೆ ಬೇಯದೆ ರಂಜಾನ್ ಹಬ್ಬವನ್ನು ಆಚರಿಸಿದರೆ ಅದಕ್ಕಿಂತ ಪಾಪ ಕೃತ್ಯ ಇನ್ನೊಂದಿಲ್ಲ. ತನ್ನ ಜೊತೆಗೆ ತನ್ನವರ ಹೊಟ್ಟೆ ತುಂಬಿಸುವ ಜವಾಬ್ದಾರಿಯೂ ಪ್ರತಿ ಮುಸಲ್ಮಾನರ ಮೇಲಿದೆ. ಮೊಹಮ್ಮದ್ ಪೈಗಂಬರ್ (ಸ.ಅ) ಕೂಡ ಹಸಿದವನಿಗೆ ಮೊದಲು ಊಟ ಕೊಡಿ ಅಂತೇಳೋ ಮೂಲಕ ರಂಜಾನ್ ಹಬ್ಬದ ಮಹತ್ವವನ್ನು ಸಾರಿದ್ದಾರೆ. ಹೀಗೆ ಹದೀಸ್ ಗಳಲ್ಲಿ ಪೈಗಂಬರ್ (ಸ.ಅ) ಜೀವನದುದ್ದಕ್ಕೂ ರಂಜಾನ್ ಬಗೆಗೆ ಮಹತ್ವ ಸಾರಿದ ಹಲವು ದಾಖಲಾತಿ ಇದೆ.

ರಂಜಾನ್ ಅಂದರೆ ತಿಂಗಳ ಹೆಸರು.!!

ಇನ್ನೊಂದು ವಿಶೇಷತೆ ಅಂದ್ರೆ ರಂಜಾನ್ ನಮಾಝ್ ಕೂಡ ಅಷ್ಟೇ‌ ಮುಖ್ಯ.‌ ಎಲ್ಲರೂ ಆದಷ್ಟು ಸಂಖ್ಯೆಯಲ್ಲಿ ಒಂದೆ ಕಡೆ ಕೂಡಿ ಸಾಮೂಹಿಕ ನಮಾಝ್ ನಿರ್ವಹಿಸಿ ರಂಜಾನ್ ಉಪವಾಸವನ್ನ ಬೀಳ್ಕೋಡೋದು ಕೂಡ ಒಂದು ಸಂಪ್ರದಾಯ. ಅಂದಹಾಗೆ, ರಂಜಾನ್ ಅನ್ನೋದು ತಿಂಗಳ ಹೆಸರು. ಜನವರಿ, ಫೆಬ್ರವರಿ ಹೇಗೆ ತಿಂಗಳೋ ಅದೇ ರೀತಿ ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ರಂಜಾನ್ ಅನ್ನೋದೊಂದು ತಿಂಗಳಷ್ಟೆ. ಈ ತಿಂಗಳಲ್ಲಿ ಖುರಾನ್ ಅವತೀರ್ಣಗೊಂಡಿರೋದ್ರಿಂದ ಇತರೆ ಎಲ್ಲಾ ಮಾಹೆಗಳಿಗಿಂತ ಈ ರಂಜಾನ್ ತಿಂಗಳು ಭಿನ್ನವಾಗಿ ನಿಲ್ಲುತ್ತದೆ.

ಹೊಸ ಹೊಸ ಉಡುಪು & ಭರಪೂರ ಬೋಜನ

ಇನ್ನು ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ಧರಿಸೋದು ಕೂಡ ಒಂದು ವಿಶೇಷ. ಜೊತೆಗೆ ಎಂದಿಗಿಂತ ಶುಚಿ ರುಚಿಯಾದ ಆಹಾರ ಸೇವಿಸೋದು ಮುಸಲ್ಮಾನರ ಇಷ್ಟದ ಕೆಲಸ. ಬಿರಿಯಾನಿ, ಸಿಹಿಯಾದ ತಿಂಡಿ ತಿನಿಸುಗಳು ನಮಾಝ್ ಮುಗಿಸಿದ ತಕ್ಷಣ ಬಟ್ಟಲಲ್ಲಿ ಸಿದ್ಧವಿರಬೇಕು. ಏನೇ ತಿಂದಿದ್ದರೂ ರಂಜಾನ್ ಹಬ್ಬದ ಬಿರಿಯಾನಿ ಸ್ವಾದಕ್ಕೆ ಸಮ ಯಾವುದು‌ ನಿಲ್ಲದು. ಈಗ ಮತ್ತೊಂದು ರಂಜಾನ್ ಹಬ್ಬದ ದಿನದಲ್ಲಿದ್ದೇವೆ.‌ ನಿಮ್ಮ ತಟ್ಟೆಯಲ್ಲಿರುವ ಬಿರಿಯಾನಿ ಇನ್ನಷ್ಟು ಸ್ವಾದ ಆಗಲಿ. ಇನ್ನಷ್ಟು ರುಚಿ ನೀಡಲಿ.‌ ನೀವು ಮಾಡುವ ಅಪ್ಪುಗೆ ಪ್ರೀತಿಯ ಸಂಕೇತವಾಗಲಿ. ಎಲ್ಲಾ ಮಿತಿಗಳ ಗೋಡೆಗಳ ಮೀರಿ ಹಬ್ಬ ಎಲ್ಲರ ಬದುಕಿಗೂ ಬೆಳಕಾಗಲಿ. ಖುಷಿ ಸಂಭ್ರಮ ಸಂತೋಷ ನೆಮ್ಮದಿ ನಿಮ್ಮದಾಗಲಿ ಎಂದು ಹಾರೈಸುತ್ತಿದ್ದೇವೆ ನಾವು.

ಸಮಸ್ತ ಓದಗರ ಬಾಂಧವರಿಗೆ

ಈದ್ ಮುಬಾರಕ್
ಈ ಮೀಡಿಯಾ ಲೈನ್ ಬಳಗ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here