ಶಹಾಬಾದ: ನಗರದಲ್ಲಿ ಶನಿವಾರ ತಾಪಂ ಚುನಾವಣೆ ನಿಮಿತ್ತ ತಾಪಂ ಅಧ್ಯಕ್ಷ ಸ್ಥಾನ ಪೈಪೋಟಿಯಲ್ಲಿದ್ದ ಮೇರಜಾ ಬೇಗಂ ಶೇರಲಿ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಬಿ-ಫಾರ್ಮ ನೀಡದಿರುವುದಕ್ಕೆ ಶೇರಅಲಿ ಅವರದೇ ಪಕ್ಷದ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ ಘಟನೆ ನಡೆಯಿತು.
ತಾಪಂ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಹೊನಗುಂಟಾ ತಾಪಂ ಸದಸ್ಯೆ ಸಂಗೀತಾ ದೇವೆಂದ್ರ ಕಾರೊಳ್ಳಿ ಹಾಗೂ ಮರತೂರ ತಾಪಂ ಸದಸ್ಯೆ ಮೇರಜಾಬೇಗಂ ಶೇರಲಿ ಅವರ ಮಧ್ಯೆ ಬಿರುಸಿನ ಪೈಪೋಟಿ ನಡೆದಿತ್ತು.ಆದರೆ ಶನಿವಾರ ಚುನಾವಣಾ ನಾಮಪತ್ರ ಸಲ್ಲಿಸಲು ಹೋಗುವ ಸಂದರ್ಭದಲ್ಲಿ ಹೈಕಮಾಂಡ ಸಂಗೀತಾ ಕಾರೊಳ್ಳಿ ಅವರಿಗೆ ಬಿ-ಫಾರ್ಮ ನೀಡಿದ್ದರಿಂದ ಮೇರಜಾಬೇಗಂ ಅವರ ಪತಿ ಶೇರಅಲಿ ನೇರವಾಗಿ ಅಲ್ಲಿಯೇ ಇದ್ದ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲರನ್ನು ಅವಾಚ್ಯ ಶಬ್ಧದಿಂದ ನಿಂದಿಸಿದರು.
ಅಲ್ಲದೇ ಈ ಮಗನೇ ಎಲ್ಲಾ ಹೊಲಸ್ ಮಾಡಿದ್ದು. ಎಲ್ಲಾ ಪಕ್ಷದಲ್ಲಿ ಓಡಾಡಿ ಬಂದು ಈಗ ಪಕ್ಷದಲ್ಲೇ ರಾಜಕೀಯ ಮಾಡ್ತೀಯಾ. ಪಕ್ಷದಲ್ಲಿ ಈಗೀಗ ಬಂದಿದ್ದಿ.ನಾನು ಮೂವತ್ತ ವರ್ಷದಿಂದ ಇದ್ದೀನಿ.ಎಲ್ಲಾ ಡಬಲ್ ಗೇಮ್ ನಿಂದೆ.ನಿಮ್ಮ ಜಾತಿಯವನನ್ನು ಎಪಿಎಮಸಿ ಅಧ್ಯಕ್ಷನಾಗಿ ಮಾಡಲು ಓಡಾಡಿದಿ.ನಮಗಂದ್ರು ಮೋಸ ಮಾಡಿದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಪಂ ಅಧ್ಯಕ್ಷ ಸಾಹೆಬ್ರು ಯಾರಿಗೆ ಹೆಳ್ತಾರೇ ಅವರಿಗಿ ಮಾಡ್ತಾರಾ ಎಂದು ಶಿವಾನಂದ ಪಾಟೀಲರು ಹೇಳಿದರು. ಇನ್ನೇನು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತೆ ಎನ್ನುವರಷ್ಟರಲ್ಲಿಯೇ ಅಲ್ಲಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಪೊಲೀಸರು ಶೇರ ಅಲಿ ಅವರನ್ನು ಅಲ್ಲಿಂದ ಕರೆದುಕೊಂಡು ಹೋದರು.ನಂತರ ಪರಿಸ್ಥಿತಿ ತಣ್ಣಗಾಯಿತು.