ಶಹಾಬಾದ: ಅಂಬೇಡ್ಕರ್ ಎಂದರೆ ಸಂವಿಧಾನ ಶಿಲ್ಪಿ, ದಲಿತರ ನಾಯಕ, ಮೀಸಲಾತಿಯ ಜನಕ ಅಷ್ಟೇ ಅಲ್ಲದೇ ಅವರೊಬ್ಬ ಬಹುಮುಖ ವ್ಯಕ್ತಿತ್ವದ ಮಹಾನ್ ನಾಯಕ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.
ಅವರು ರವಿವಾರ ಹೊನಗುಂಟಾ ಗ್ರಾಮದ ಭೀಮನಗರದಲ್ಲಿ ದಸಂಸ ವತಿಯಿಂದ ಆಯೋಜಿಸಲಾದ ಧಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಮಹಾನಾಯಕ ಬ್ಯಾನರ್ ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಸಂಕೀರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ್ ಎಂದರೆ ಒಬ್ಬ ಅಹಿಂಸಾವಾದಿ. ಅವರೊಬ್ಬ ರೈತ ತಜ್ಞ, ಆರ್ಥಿಕ ತಜ್ಞ, ಶಿಕ್ಷಣ ತಜ್ಞ, ಭೂಮಿ ತಜ್ಞ, ಮಹಿಳಾವಾದಿ, ಕಾರ್ಮಿಕವಾದಿ ಎಂದು ಹೇಳಿಕೊಡದೇ ಇರುವ ಇನ್ನೂ ಶೇ95 ರಷ್ಟು ವ್ಯಕ್ತಿತ್ವ ಮರೆಮಾಚಲಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಮಾತನಾಡಿ, ಜಾತಿ, ಅಸ್ಪೃಶ್ಯತೆಯ ಅವಮಾನಗಳನ್ನು ಸಹಿಸಿಕೊಂಡಿದ್ದ ಅಂಬೇಡ್ಕರ್, ಒಂದು ವೇಳೆ ಜಾತಿವಾದಿಗಳ ವಿರುದ್ಧ ಪ್ರತಿಕಾರ ತೆಗೆದುಕೊಳ್ಳಲು ನಿರ್ಧಾರ ತೆಗೆದುಕೊಂಡಿದ್ದರೇ, ಈ ದೇಶದಲ್ಲಿ ರಕ್ತ ಕ್ರಾಂತಿಯೇ ನಡೆದು ಹೋಗುತ್ತಿತ್ತು.ಆದರೆ ಅವರು ಹಾಗೇ ಮಾಡದೇ ಇರುವುದಕ್ಕೆ ಕಾರಣ ಅವರೊಬ್ಬ ಅಹಿಂಸಾವಾದಿ ಎಂದು ಹೇಳಿದರು.
ಮಾಪಣ್ಣ ಗಂಜಿಗೇರಿ ಮಾತನಾಡಿ, ಯಾವ ಮನುವಾದಿಗಳು, ಸಂಪ್ರದಾಯವಾದಿಗಳು ಬುದ್ಧನನ್ನು ಈ ದೇಶದಿಂದ ಹೊರಗಟ್ಟಿದರೋ, ಆ ಬುದ್ಧನನ್ನು ಮರಳಿ ಭಾರತಕ್ಕೆ ತಂದದ್ದು ಡಾ.ಬಿ.ಆರ್. ಅಂಬೇಡ್ಕರ್. ದೇಶದಲ್ಲಿ ಮನುವಾದಿಗಳ ಜಾತೀಯತೆ, ಕಂದಾಚಾರ, ಮೂಢನಂಬಿಕೆ, ಅಸಮಾನತೆಯನ್ನು ಕಂಡು ಮಾನವೀಯತೆಯ, ವೈಚಾರಿಕ, ವೈಜ್ಞಾನಿಕ ಹಾಗೂ ನಿಸರ್ಗಕ್ಕೆ ಹತ್ತಿರವಾದ ಧರ್ಮವಾದ ಬೌದ್ಧ ಧರ್ಮವನ್ನು ಅಪ್ಪಿಕೊಂಡರು ಎಂದರು.
ಮರೆಪ್ಪ ಮೇತ್ರೆ, ಪೀರಪಾಶಾ, ದೇವೆಂದ್ರ ಕಾರೊಳ್ಳಿ, ಆನಂದ ಕೊಡಸಾ, ಭೀಮುಗೌಡ ಖೇಣಿ, ಶಿವಯೋಗಪ್ಪ ಸಾಹು ಗುಂಡಗುರ್ತಿ,ಗುರುನಾಥ ದೇಸಾಯಿ, ಶಿವರುದ್ರ ಗಿರೇನೂರ,ಮಲ್ಲಣ್ಣ ಮಸ್ಕಿ, ಬಸವರಾಜ ಮೇತ್ರೆ,ಮಲ್ಲಿಕಾರ್ಜುನ ಹಾದಿಮನಿ,ಸಾಯಿಬಣ್ಣ ಕೊಲ್ಲೂರ್ ಇತರರು ಇದ್ದರು.
ಪೂಜಪ್ಪ ಮೇತ್ರೆ ನಿರೂಪಿಸಿದರು, ರಾಘವೇಂದ್ರ ಗುಡೂರ ಸ್ವಾಗತಿಸಿದರು, ಮಹಾದೇವ ಮೇತ್ರೆ ವಂದಿಸಿದರು.