ಕಲಬುರಗಿ: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಪರಿಹಾರ ನೀಡುವಲ್ಲಿ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾರಿ ಮಳೆಯಿಂದಾಗಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿ ಒಂದು ವಾರ ಆದರೂ ನೆರೆ ಪೀಡಿತ ಜನರಿಗೆ ಪರಿಹಾರ ಸಿಕ್ಕಿಲ್ಲ.ವೈಮಾನಿಕ ಸಮೀಕ್ಷೆಯ ವರದಿ ಸಿದ್ಧಪಡಿಸಲು ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ.
ಇದೊಂದು ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಲು ಸರಕಾರ ಹಿಂಜರಿಯುತ್ತಿದೆ. ನದಿಗಳಲ್ಲಿ ಪ್ರವಾಹ ಬಂದು ಅನೇಕ ಗ್ರಾಮಗಳು ಜಲಾವೃತ ಆಗಿವೆ.ಜನರ ಮನೆಗಳಿಗೆ ನೀರು ನುಗ್ಗಿ ಇದ್ದ ಬದ್ದ ದವಸಧಾನ್ಯ ಹಾಳಾಗಿದ್ದು ಊಟಕ್ಕೂ ಗತಿ ಇಲ್ಲದೆ ಪರಿದಾಡುವಂತಾಗಿದೆ.ಸೂರು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.ಜಮೀನುಗಳಲ್ಲಿ ನೀರು ನುಗ್ಗಿ ಬಿತ್ತಿದ ಬೆಳೆ ಕೊಚ್ಚಿಕೊಂಡು ಹೋಗಿವೆ.ವಾಣಿಜ್ಯ ಬೆಳೆ ತೊಗರಿ, ಕಬ್ಬು, ಬಾಳೆ ನೀರಿನಲ್ಲಿ ನಿಂತು ಹಾಳಾಗಿವೆ.ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಆದರೂ ಮುಖ್ಯಮಂತ್ರಿಗಳು ಪರಿಹಾರ ನೀಡುವ ಗೋಜಿಗೆ ಹೋಗದೆ ಉಪಚುನಾವಣೆಯಲ್ಲಿ ಮೈ ಮರೆತಿದ್ದಾರೆ.ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ.ರೈತರ ಮತ್ತು ನೆರೆ ಸಂತ್ರಸ್ತರ ಸಂಕಷ್ಟ ಅರಿತು ಕೂಡಲೇ ಪರಿಹಾರ ನೀಡುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.