ಬಿಸಿಯೂಟ-ಕ್ಷೀರಭಾಗ್ಯ ಕಸಿದ ಸರ್ಕಾರ: ಎಐಡಿಎಸ್‌ಒ ಆರೋಪ

0
28

ವಾಡಿ: ಕೊರೊನಾ ಮಹಾಮಾರಿಯ ಅಟ್ಟಹಾಸದಿಂದಾಗಿ ರಾಜ್ಯದಲ್ಲಿ ಶಾಲೆಗಳು ನಡೆಯುತ್ತಿಲ್ಲ. ಬಡ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ ವಿತರಣೆಯಾಗುತ್ತಿದ್ದ ಬಿಸಿಯೂಟ ಮತ್ತು ಕ್ಷೀರಭಾಗ್ಯ ಸೌಲಭ್ಯಗಳು ಸ್ಥಗಿತಗೊಂಡಿವೆ. ಅಪೌಷ್ಠಿಕ ಮಕ್ಕಳ ಹೊಟ್ಟೆಯ ಮೇಲೆ ಸರ್ಕಾರವೇ ಬರೆ ಎಳೆದಿದೆ ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಆರೋಪಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ಗೌತಮ ಪರತೂರಕರ, ದುಡಿಯುವ ಕೂಲಿಕಾರ್ಮಿಕ ಕುಟುಂಬಗಳು ಲಾಕ್‌ಡೌನ್ ಸಂಕಷ್ಟದಿಂದ ಇನ್ನೂ ಹೊರಬಂದಿಲ್ಲ. ಸಂಕಷ್ಟದ ದಿನಗಳಲ್ಲೇ ಬದುಕು ದೂಡುತ್ತಿದ್ದಾರೆ. ಇನ್ನೊಂದೆಡೆ ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಸರ್ಕಾರ ಮಕ್ಕಳ ಬಿಸಿಯೂಟ ಮತ್ತು ಕ್ಷೀರಭಾಗ್ಯ ಸೌಲಭ್ಯ ಕಸಿದುಕೊಂಡು ಅನ್ಯಾಯ ಎಸಗಿದೆ. ಬಿಸಿಯೂಟದ ಬದಲು ಆಹಾರ ಧಾನ್ಯಗಳು ಹಾಗೂ ಕ್ಷೀರಭಾಗ್ಯದ ಬದಲು ಹಾಲಿನ ಪೌಡರ್ ವಿದ್ಯಾರ್ಥಿಗಳ ಮನೆಗೆ ತಲುಪಿಸುವ ಕಾರ್ಯ ಮುಂದುವರೆಸಬೇಕಿದ್ದ ಸರ್ಕಾರ ಸಂಪೂರ್ಣ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಆಪಾದಿಸಿದ್ದಾರೆ.

Contact Your\'s Advertisement; 9902492681

ರಾಜ್ಯದಲ್ಲಿ ಈ ಯೋಜನೆಯ ಫಲಾನುಭವಿಗಳಾಗಿದ್ದ ೪೮ ಲಕ್ಷ ಮಕ್ಕಳಲ್ಲಿ ಜೂನ್ ತಿಂಗಳಿಂದ ಯಾವೂದೇ ರೀತಿಯ ಆಹಾರ ಧಾನ್ಯಗಳು ವಿತರಣೆಯಾಗಿಲ್ಲ. ಪರಿಣಾಮ ಅಪೌಷ್ಠಿಕ ಮಕ್ಕಳು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾಧ್ಯಮಗಳ ವರದಿಯಂತೆ ಬೆಳಗಾಂವಿ ಜಿಲ್ಲೆಯ ಸರ್ಕಾರಿ ಗೋದಾಮಿನಲ್ಲಿ ೪೮೭೫೭.೬೯ ಕ್ವಿಂಟಲ್ ಅಕ್ಕಿ, ೯೧೯೨.೨೯ ಕ್ವಿಂಟಲ್ ಗೋದಿ ಹಾಗೂ ೫೯೭೬ ಕ್ವಿಂಟಲ್ ದ್ವೀದಳ ಧಾನ್ಯಗಳು ಹಾಗೆಯೇ ಉಳಿದಿವೆ. ಕೇವಲ ಒಂದು ಜಿಲ್ಲೆಯ ಚಿತ್ರಣ ಹೀಗಿರುವಾಗ ಇತರ ಜಿಲ್ಲೆಗಳ ಗೋದಾಮಿನಲ್ಲಿ ಲಕ್ಷಾಂತರ ಕ್ವಿಂಟಲ್ ಧಾನ್ಯಗಳು ಇಲಿ-ಹೆಗ್ಗಣಗಳ ಪಾಲಾಗುತ್ತಿದ್ದರೆ ಆಶ್ಚರ್ಯವಿಲ್ಲ. ಈ ಆಹಾರ ಧಾನ್ಯಗಳನ್ನು ತಕ್ಷಣವೇ ಫಲಾನುಭವಿ ಮಕ್ಕಲೀಗೆ ವಿತರಿಸುವ ಆದೇಶ ನೀಡುವ ಬದಲು ಗೋದಾಮಿನಲ್ಲಿ ಸಂರಕ್ಷಿಸಿಡುವ ಸರ್ಕಾರದ ಆದೇಶ ಆಳ್ವಿಕರ ಹೃದಯಹೀನತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾಳ ಕೊರೊನಾ ದಿನಗಳಲ್ಲಿ ಬಡವರ ತುತ್ತಿನ ಚೀಲದ ಸ್ಥಿತಿಯು ಚಿಂತಾಜನಕ ಸ್ಥಿತಿಯಲ್ಲಿರುವಾಗ ಸರ್ಕಾರಗಳು ಹಿಂದೆಂದಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿ ಎಲ್ಲರಿಗೂ ಆಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ದುರಂತವೆಂದರೆ, ಅಪಾಯದ ಅಂಚಿನಲ್ಲಿರುವ ಹಸಿವಿನ ಈ ಪರಿಸ್ಥಿತಿಯನ್ನು ಬದಲಿಸಲು ಯಾವೂದೇ ಗಂಭೀರ ಪ್ರಯತ್ನ ನಡೆಸದ ಸರ್ಕಾರಗಳು ಜನದ್ರೋಹಿಗಳಾಗಿವೆ.

ಇದರ ವಿರುದ್ಧ ಪ್ರಬಲ ಹೋರಾಟ ಭುಗಿಲೇಳುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಗೋದಾಮಿನಲ್ಲಿರುವ ಧಾನ್ಯಗಳನ್ನು ಮಕ್ಕಳಿಗೆ ತಲುಪಿಸಲು ಮುಂದಾಗಬೇಕು ಎಂದು ವಿದ್ಯಾರ್ಥಿ ನಾಯಕ ಗೌತಮ ಪರತೂರಕರ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here