ವಿಶ್ವಕರ್ಮ ಸ್ವಾಮೀಜಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಕಿಡಿ: ವಿಡಿಯೋ ವೈರಲ್
ಕಲಬುರಗಿ: ವಿಶ್ವಕರ್ಮ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ವಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ, ವಿಶ್ವಕರ್ಮ ಸಮಾಜದ ಜಿಲ್ಲಾ ಮುಖಂಡ ಬಸವರಾಜ ಪಂಚಾಳ ಪರವಾಗಿ ಕಲಬುರಗಿ ನಗರದ ಏಕದಂಡಿಗಿ ಮಠದ ಪೂಜ್ಯ ಶ್ರೀಸುರೇಂದ್ರನಾಥ ಮಹಾಸ್ವಾಮೀಜಿ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾತನಾಡಿದ್ದಕ್ಕೆ ಸಿಡಿಮಿಡಿಕೊಂಡ ವಿಧಾನ ಪರಿಷತ್ ಸದಸ್ಯ, ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರು ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಶ್ವಕರ್ಮ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೂರು ನಿಮಿಷದ ವಿಡಿಯೋದಲ್ಲಿ ಸುರೇಂದ್ರನಾಥ ಸ್ವಾಮೀಜಿಯವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಎಂಎಲ್ಸಿ ಕೆ.ಪಿ.ನಂಜುಂಡಿ, ವಿಶ್ವಕರ್ಮ ಸಮಾಜಕ್ಕೆ ಅನುದಾನ, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವೂದಾದರೂ ಯೋಜನೆ ಅಥವ ಕೊರೊನಾ ಸಂಕಷ್ಟದ ಪ್ಯಾಕೇಜ್ ಘೋಷಿಸಿ ಎಂದು ಸರಕಾರವನ್ನು ಕೇಳಬೇಕಾದ ಸುರೇಂದ್ರನಾಥ ಸ್ವಾಮೀಜಿ ಅವರು ಬಸವರಾಜ ಪಂಚಾಳ ಎಂಬುವವರನ್ನು ವಿಶ್ವಕರ್ಮ ನಿಗಮದ ಅಧ್ಯಕ್ಷ ಮಾಡಿ ಎಂದು ರಾಜಕಾರಣೀಯ ರೀತಿಯಲ್ಲಿ ಕೇಳಿರುವುದು ನಾಚಿಕೆಗೇಡಿನ ಸಂಗತಿ. ಬೇರೆ ಜಾತಿಯವರು ಬಹಳಷ್ಟು ಜನ (ದೈವಜ್ಞ ಬಾಹ್ಮಣ್ಣರು) ವಿಶ್ವಕರ್ಮದಲ್ಲಿ ಉಪ ಜಾತಿಯಾಗಿ ಸೇರಿಕೊಂಡಿದ್ದಾರೆ ಎಂದು ನಾನು ಇದರ ವಿರುದ್ಧ ದನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಹೋರಾಟ-ಪ್ರತಿಕೃತಿ ದಹನ ನಡೆಯುತ್ತಿದ್ದರೂ ಸ್ವಾಮೀಜಿ ಸುಮ್ಮನಿದ್ದಾರೆ. ಸಮಾಜದ ಬಗ್ಗೆ ಚಿಂತನೆ ಮಾಡದೆ ಮಠದಲ್ಲಿ ಭಕ್ತರನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಸ್ವಾಮೀಜಿಗೆ ರಾಜಕೀಯ ಮಾಡುವ ಆಸೆಯಿದ್ದರೆ ಖಾವಿಯನ್ನು ಕಳಚಿ ಮಠ ತೊರೆದು ಹೊರಬರಲಿ ಎಂದು ಕಿಡಿಕಾರಿದ್ದಾರೆ.
ವಿಶ್ವಕರ್ಮ ಸಮಾಜಕ್ಕಾಗಿ ಮತ್ತು ಭಾರತೀಯ ಜನತಾ ಪಕ್ಷಕ್ಕಾಗಿ ನಾನು ದುಡಿದಿದ್ದೇನೆ. ಸಹಜವಾಗಿ ನಾನು ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಿಲ್ಲೆಯ ವಿಶ್ವಕರ್ಮ ಸಮಾಜದ ಮುಖಂಡರು, ವಿವಿಧ ಸಮಾಜಗಳ ನಾಯಕರು ಹಾಗೂ ಜಿಲ್ಲೆಯ ಅನೇಕ ಜನ ಶಾಸಕರು ನನ್ನ ಪರವಾಗಿ ನಿಂತಿದ್ದಾರೆ.
ನಮ್ಮ ಸಮಾಜದ ಸ್ವಾಮೀಜಿಯವರೂ ನನಗೆ ಆಶೀರ್ವಾದ ಮಾಡಿದ್ದಾರೆ. ಅಂತಿಮವಾಗಿ ಪಕ್ಷದ ಹೈಕಮಾಂಡ ತೀರ್ಮಾನ ಕೈಗೊಳ್ಳುತ್ತದೆ. ಇದನ್ನು ಸಹಿಸದ ಕೆ.ಪಿ.ನಂಜುಂಡಿ ಅವರು ಸ್ವಾಮೀಜಿಗಳ ವಿರುದ್ಧ ಹಗುರವಾಗಿ ಮಾತನಾಡಿ ವಿಡಿಯೋ ಹರಿಬಿಟ್ಟಿರುವುದು ರಾಜ್ಯದ ವಿಶ್ವಕರ್ಮರಿಗೆ ನೋವು ತರಿಸಿದೆ. ಪೂಜ್ಯ ಸುರೇಂದ್ರನಾಥ ಸ್ವಾಮೀಜಿ ಅವರ ಆಶೀರ್ವಾದದಿಂದಲೇ ಎಂಎಲ್ಸಿ ಆಗಿರುವುದನ್ನು ಅವರು ಮರೆತಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವೂದೇ ಸ್ಥಾನಮಾನ ಸಿಗದೆ ಬಿಜೆಪಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ರಾಜಕೀಯ ಅಧಿಕಾರ ಪಡೆದುಕೊಂಡ ನಂಜುಂಡಿಯವರು ಮರಳಿ ಸಮಾಜಕ್ಕೇನೂ ಕೊಡಲಿಲ್ಲ. ರಾಜಕೀಯವಾಗಿ ತೀರಾ ಹಿಂದುಳಿದಿರುವ ವಿಶ್ವಕರ್ಮ ಸಮಾಜಕ್ಕೆ ಸಮಾಜದವರೇ ಕಂಟಕವಾಗಿ ಕಾಡುತ್ತಿರುವುದು ಬೇಸರ ತರಿಸಿದೆ.