ಶಹಾಬಾದ:ರಾಷ್ಟ್ರೀಯ ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಾಗಿದ್ದಲ್ಲಿ, ಭಾವ ಚಿತ್ರ ತಿದ್ದುಪಡಿ ಮಾಡಿಕೊಳ್ಳಲು ಮತದಾರರಿಗೆ ಅವಕಾಶ ಲಭಿಸಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಹಸೀಲ್ದಾರ ಸುರೇಶ ವರ್ಮಾ ತಿಳಿಸಿದ್ದಾರೆ.
ರಾಷ್ಟ್ರೀಯ ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕರಡು ಮತದಾರರ ಯಾದಿ ಪ್ರಕಟವಾಗಿದೆ. ಜನೇವರಿ 1, 2021ಕ್ಕೆ ಹದಿನೆಂಟು ವರ್ಷ ಪೂರ್ಣಗೊಂಡು ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದಕ್ಕೆ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 17 ಕೊನೆಯ ದಿನಾಂಕವಾಗಿದೆ. ಇದೇ ನವೆಂಬರ್ 29, ಡಿಸೆಂಬರ್ 6 ಮತ್ತು 13 ರಂದು ವಿಶೇಷ ಪರಿಷ್ಕರಣೆ ಹಮ್ಮಿಕೊಳ್ಳಲಾಗಿದೆ.ಸ್ವೀಕೃತ ಅರ್ಜಿ ಇತ್ಯರ್ಥಗೊಳಿಸಲು ಜನೇವರಿ 7, 2021 ಕೊನೆಯ ದಿನಾಂಕವಾಗಿದೆ.ಪೂರಕ ಪಟ್ಟಿಗಳ ಮುದ್ರಣ ಜನೇವರಿ 14ಕ್ಕೆ ಗಡುವು ವಿಧಿಸಿದ್ದು, ಅಂತಿಮವಾಗಿ ಜನೇವರಿ 18ರಂದು ಮತದಾರರ ಭಾವ ಚಿತ್ರವುಳ್ಳ ಮತದಾರರ ಪಟ್ಟಿ ಪ್ರಕಟವಾಗಲಿದೆ.ಆದ್ದರಿಂದ ಶಹಾಬಾದ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಹಸೀಲ್ದಾರರು ಕೋರಿದ್ದಾರೆ.