ವಾಡಿ: ಕಳೆದ ವಿಧಾನ ಸಭೆ ಚುನಾವಣೆ ವೇಳೆ ಅಫಜಲಪುರ ಮತಕ್ಷೇತ್ರದಲ್ಲಿ ಮಾಲಿಕಯ್ಯ ಗುತ್ತೇದಾರ ಸೋಲಿಗೆ ಸ್ಥಳೀಯ ಬಿಜೆಪಿ ನಾಯಕರುಗಳೇ ಕಾರಣರಾಗಿದ್ದಾರೆ. ಇಂತಹ ಪಕ್ಷ ದ್ರೋಹಿಗಳು ಪ್ರತಿಯೊಂದು ತಾಲೂಕಿನಲ್ಲೂ ಇದ್ದಾರೆ. ಅವರನ್ನು ಕೂಡಲೇ ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ಗ್ರಾಪಂ ಚುನಾವಣೆ ಗೆಲ್ಲುವುದೂ ಕೂಡ ಕಷ್ಟವಾಗುತ್ತದೆ ಎಂದು ಬಿಜೆಪಿ ಚಿತ್ತಾಪುರ ತಾಲೂಕು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ, ರಾವೂರಿನ ಯುವ ಮುಖಂಡ ಶರಣು ಜ್ಯೋತಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಮಲ ಪಕ್ಷದೊಳಗಿನ ಆತಂರಿಕ ಶತ್ರುಗಳ ವಿರುದ್ಧ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಅವರಿಗೆ ಬಹಿರಂಗ ಪತ್ರ ಬರೆದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ಪಕ್ಷದ ಕಾರ್ಯಶೈಲಿ ವಿರುದ್ಧ ಅತೃಪ್ತಿ ಹೊರಹಾಕಿರುವ ಶರಣು ಜ್ಯೋತಿ, ಪಕ್ಷದ ಚಿನ್ಹೆಯಡಿ ಚುನಾವಣೆ ಎದುರಿಸಿ ಜಿಪಂ ಹಾಗೂ ತಾಪಂ ಸದಸ್ಯರಾಗಿದ್ದವರು ವಿಧಾನಸಭೆ ಚುನಾವಣೆ ವೇಳೆ ಪಕ್ಷದ ವಿರುದ್ಧದ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಅಫಜಲಪುರ ತಾಲೂಕಿನ ಮಾಶಾಳ, ಕರ್ಜಗಿ, ಅತನೂರ ಹಾಗೂ ಗೊಬ್ಬೂರ ಜಿಪಂ ಸದಸ್ಯರು ತಾಂತ್ರಿಕವಾಗಿ ಇನ್ನೂ ಪಕ್ಷದೊಳಗಿದ್ದಾರೆ. ಬಿಜೆಪಿಯೊಳಗಿದ್ದುಕೊಂಡೇ ಇವರು ಅನ್ಯ ಪಕ್ಷದ ಪರವಾಗಿ ಕೆಲಸ ಮಾಡಿದ್ದು ಬಹಿರಂಗ ಸತ್ಯದಂತಿದೆ. ಇಂತಹವರಿಗೆ ಮತ್ತೆ ಜವಾಬ್ದಾರಿಗಳನ್ನು ಕೊಟ್ಟಿರುವುದು ಪಕ್ಷದ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟಂತಾಗಿದೆ ಎಂದು ದೂರಿದ್ದಾರೆ.
ತತ್ವಸಿದ್ಧಾಂತ ಮತ್ತು ಶಿಸ್ತಿಗೆ ಹೆಚ್ಚಿನ ಆಧ್ಯತೆ ನೀಡುವ ನಮ್ಮ ಬಿಜೆಪಿ ಪಕ್ಷದಲ್ಲೀಗ ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ ಪಕ್ಷದ್ರೋಹಿಗಳಿಗೆ ಮಣೆ ಹಾಕಲಾಗುತ್ತಿದೆ. ವೈಯಕ್ತಿಕ ಬದುಕು ಮೀಸಲಿಟ್ಟು ನಿಯತ್ತಾಗಿ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿರುವವರನ್ನು ಗುರುತಿಸುವಲ್ಲಿ ಜಿಲ್ಲಾ ಸಮಿತಿ ಸೋತಿದೆ. ಕಾರ್ಯಕರ್ತರಾಗಿ ದುಡಿಯುತ್ತಿರುವ ಕಟ್ಟರ್ ಬಿಜೆಪಿ ಮುಖಂಡರುಗಳಿಗೆ ಬೆಲಿಯಿಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಶರಣು ಜ್ಯೋತಿ, ಪಕ್ಷದೊಳಗಿದ್ದುಕೊಂಡೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಗುತ್ತಿರುವವ ಆತಂರಿಕ ಶತ್ರುಗಳನ್ನು ಕೂಡಲೇ ಉಚ್ಚಾಟಿಸಿ ಪಕ್ಷ ಉಳಿಸಬೇಕು. ಇದು ನಿಮ್ಮಿಂದ ಸಾಧ್ಯವಾಗದಿದ್ದರೆ ನೈತಿಕ ಹೊಣೆಹೊತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.