ವೀರಸನ್ಯಾಸಿ, ವಿಶ್ವವಿಜೇತ – ಸ್ವಾಮಿ ವಿವೇಕಾನಂದ

0
49

ಇಳೆಗಿಳಿದ ಅವಧೂತ ಸುವಿವೇಕ ನವನೀತ ಓ! ವೀರ ಸನ್ಯಾಸಿ ಪಾವನ ಪವಿತ್ರ ಧರ್ಮ ಕರ್ಮದ ಮರ್ಮ ಅಂತರಂಗವ ಬಲ್ಲ ಜ್ಞಾನಿ-ಯೋಗಿ-ತಪಸ್ವಿ ಅಧ್ಯಾತ್ಮ ಮಿತ್ರ-1

ಭುವನೇಶ್ವರೀ ವಿಶ್ವನಾಥದತ್ತರ ಕಂದ ಬದುಕಿ ಸತ್ತಂತಿಹರ ಬದುಕಿಸಲು ಬಂದೆ ಪರಮಹಂಸರ ದಿವ್ಯ ಭವ್ಯ ಮಾನಸ ಪುತ್ರ ಈ “ಭವ”ಕೆ ಆ “ದಿವ”ದ ಅಮೃತವನೆ ತಂದೆ-2

Contact Your\'s Advertisement; 9902492681

ರಾಷ್ಟ್ರವನು ಮುಸುಕಿದ್ದ ಮಾಯೆ-ಮಿಥ್ಯಾ ನಿಶೆಯ ಸತ್ಯ ಕಿರಣಗಳಿಂದ ಭುಂಜಿಸಿದ ಸೂರ್ಯ ಕುರುಡು ಶ್ರದ್ಧೆಯ ಬಳ್ಳಿ ಹರಡಿ ಹಬ್ಬದ ಹಾಗೆ ಬೇರನೇ ಕಿತ್ತೆಸೆದು ರಂಜಿಸಿದ ಆರ್ಯ-3

ಪ್ರಥಮ ನೋಟದೆ ಪರಮಹಂಸ ಹುಚ್ಚರು ಎಂದು ಆ ಹುಚ್ಚಿನಲೆ ಜಗವ ಎಚ್ಚರಿಸಿದವರು ನರ-ಕುರಿಗೆ ಹುಲಿ-ಸಿಂಹ ಘರ್ಜನೆಯ ಮೊಳಗಿಸುತ ದಿಟದ ಧೀರೋದಾತ್ತ ನಡೆ ಕಲಿಸಿದವರು-4

ಅಜ್ಞಾನ-ದಾರಿದ್ರ್ಯ ಕುಬ್ಜ-ಕ್ಲೈಬ್ಯತೆ ತಿಮಿರ ಸ್ವಪ್ರಭೆಯ ಮರೆತು ಮಲಗಿದ್ದವರ ತಿವಿದು ಏಳಿ ಎಚ್ಚರಗೊಳ್ಳಿ ನಿಲ್ಲದೇ ಗುರಿ ತಲುಪಿ ಪಥ ತೋರಿದಿರಿ ತರುಣ ಪೀಳಿಗೆಗೆ ಅಂದು-5

ದೀನ ದಲಿತರ ಬಂಧು ಪ್ರೇಮ ಕರುಣೆಯ ಸಿಂಧು ಕಾಮ-ಮೋಹವ ಗೆದ್ದ ಅಧ್ಯಾತ್ಮ ಭೀಮ ವಾಸು-ಏಸು-ರಹೀಮ ಏಸೊಂದು ವಿಧ-ಭೇದ ನುಡಿದಿರೊಬ್ಬನೆ ದೇವ ಹಲವಾರು ನಾಮ-6

ನಮ್ಮ ಧರ್ಮವು ಮೇಲು-ನಿಮ್ಮ ಧರ್ಮವು ಕೀಳು ಎಂಬ ವಾದವ ಖಂಡಿಸಿದ ಯೋಗಿವರ್ಯ ಮೇಲು-ಕೀಳುಗಳೆಲ್ಲ ನಮ್ಮ ಭ್ರಮೆಯೆಂದರುಹಿ ಸಮ-ಸಮಾನತೆಯ ಬೋಧಿಸಿದ ಆಚಾರ್ಯ-7

ಬಂಧು-ಭಗಿನಿಯರೆನುವ ಸೂಕ್ಷ್ಮ ಸಂವೇದನೆಯ ಹೃದಯ ಸ್ಪಂದನೆಯಿಂದ ಜಯಿಸಿದಿರಿ ಜಗವ ಆ ಜಾಗತಿಕ ಸರ್ವ ಧರ್ಮ ಸಮ್ಮೇಳನದಿ ಮೆರೆಸಿದಿರಿ ಭಾರತದ ಸಂಸ್ಕೃತಿಯ ಧ್ವಜವ-8

ಕನ್ಯಾಕುಮಾರಿ ಭೂಶಿರದವರೆಗಿನ ಪಯಣ ಪರಿವ್ರಾಜಕಾಚಾರ್ಯ ಆರ್ಷೇಯ ಸಂತ ತತ್ವ ಬನದ ಬಸಂತ ಜ್ಞಾನಗಿರಿಯ ಮಹಂತ ಯೋಗಿ ಭಾಸ್ಕರ ದಿವ್ಯ ಸ್ಮರಣೆಯೆ ಪುನೀತ-9

ಕಿರಿವಯದಿ ಹಿರಿದನ್ನು ಸಾಧಿಸಿದ ಮಹನೀಯ ಸುರಭಿಸಿತು ನಿನ್ನಿಂದ ಭಾರತದ ಹಿರಿಮೆ ವಿಶ್ವ ಭಾರತಿ ಕಂದ ಶ್ರೀ ವಿವೇಕಾನಂದ ನಿರುತ ಬೆಳಗುತಲಿಹುದು ತವ ಕೀರ್ತಿ ಮಹಿಮೆ-10

-ಟಿ.ಕೆ.ಗಂಗಾಧರ ಪತ್ತಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here