ಕಲಬುರಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಪ್ರೊ. ದಯಾನಂದ ಅಗಸರ ಅವರನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳನ್ನಾಗಿ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರು ಹಾಗೂ ಉಪಮಖ್ಯಮಂತ್ರಿಗಳಾದ ಅಶ್ವತ್ ನಾರಾಯಣ ಹಾಗೂ ಸರ್ಕಾರವನ್ನು ಅಭಿನಂದಿಸುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಹಾಗೂ ಜಿಲ್ಲೆಗೆ ಮಲತಾಯಿ ಧೋರಣೆ ತೋರುತ್ತಿದ್ದು, ನ್ಯಾಯ ಕೊಡಿಸಬೇಕು ಎಂದು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಮೊದಲಿನಿಂದಲೂ ಪತ್ರ ಹಾಗೂ ಹೋರಾಟ ಮಾಡುತ್ತ ಬರಲಾಗಿದೆ. ನಮ್ಮ ಹೋರಾಟದ ಫಲವಾಗಿ ಇಂದು ನಮ್ಮ ಭಾಗದವರನ್ನೇ ನೇಮಕ ಮಾಡಿರುವುದು ನಮಗೆ ಸಂತೋಷ ತಂದಿದೆ ಎಂದರು.
ಈ ಹಿಂದೆ ಇದೇ ಭಾಗದ ಪ್ರೊ. ಶರಣಪ್ಪ ಹಲ್ಸೆ ಹಾಗೂ ಪ್ರೊ. ಬಿ.ಜಿ. ಮೂಲಿಮನಿ ಮಾತ್ರ ಕುಲಪತಿಗಳಾಗಿದ್ದರು. ಈಗ ನಮ್ಮ ಜಿಲ್ಲೆಯವರು ಕುಲಪತಿಗಳಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ವಿವರಿಸಿದರು.
ಕಸಾಪ ಜಿಲ್ಲಾ ಖಜಾಂಚಿ ದೌಲತರಾಯ ಮಾಲಿಪಾಟೀಲ, ಪ್ರದಾನ ಕಾರ್ತದರ್ಶಿ ಮಡಿವಾಳಪ್ಪ ನಾಗರಳ್ಳಿ, ತಾಲ್ಲೂಕು ಕಸಾಪ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ಕಲಬುರಗಿ ಉತ್ತರ ವಲಯ ಕಸಾಪ ಅಧ್ಯಕ್ಷ ಲಿಂಗರಾಜ ಸಿರಗಾಪುರ, ಡಾ. ಕೆ.ಎಸ್. ಬಂಧು, ಸುರೇಶ ಹತ್ತಿ, ಅಂಬಾಜಿ ಕೌಲಗಿ, ಆನಂದ ನಂದೂರಕರ್ ಇತರರು ಇದ್ದರು.