ಕಲಬುರಗಿ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಜಿಲ್ಲೆಯಲ್ಲಿ ಮೊದಲಿಗರಾಗಿ ಖುದ್ದು ಕೋವಿಶೀಲ್ಡ್ ಲಸಿಕೆ ಪಡೆಯುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ನೀಡಲಾಗುತ್ತಿರುವ ಲಸಿಕಾಕರಣ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಳೆದ ಜನವರಿ 16 ರಿಂದ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ. ಅದೇ ರೀತಿ ದಿನನಿತ್ಯದ ಜೀವನದಲ್ಲಿ ಸಾರ್ವಜನಿಕರ ಸಂಪರ್ಕದಲ್ಲಿ ಬರುವ ಹೆಚ್ಚಿನ ರಿಸ್ಕ್ ಹೊಂದಿರುವ ಕಂದಾಯ, ನಗರಾಭಿವೃದ್ಧಿ, ಗೃಹ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳಿಗೆ ಇಂದಿನಿಂದ ಫೆಬ್ರವರಿ 10ರ ವರೆಗೆ ಮೂರು ದಿನಗಳ ಕಾಲ ಲಸಿಕೆ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮ ಇಲ್ಲ. ಹೀಗಾಗಿ ಅಧಿಕಾರಿ-ಸಿಬ್ಬಂದಿಗಳು ಭಯಪಡದೆ ಲಸಿಕೆ ಹಾಕಿಸಿಕೊಳ್ಳಬೇಕು. ಈಗ ನಾನು ಲಸಿಕೆ ಹಾಕಿಕೊಂಡಿದ್ದು, ಏನು ತೊಮದರೆ ಇಲ್ಲ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೂ ಈ ಲಸಿಕೆ ನೀಡಲಾಗುತ್ತಿದ್ದು, ಆತಂಕಕ್ಕೊಳಗಾಗಬೇಕಿಲ್ಲ ಎಂದರು.
ಸಾಮಾನ್ಯವಾಗಿ ಮಕ್ಕಳಿಗೆ ನೀಡಲಾಗುವ ಲಸಿಕೆಯಂತೆ ಇದ್ದು, ಲಸಿಕೆ ಪಡೆದ ನಂತರ ಸಣ್ಣ-ಪುಟ್ಟ ಜ್ವರ ಬಂದರು ಭಯಪಡಬೇಕಿಲ್ಲ. ಇದರ ಚಿಕಿತ್ಸೆಗೆ ಎಲ್ಲಾ ಲಸಿಕಾ ಕೇಂದ್ರದಲ್ಲಿ ಪ್ರತ್ಯೇತ ಆರೋಗ್ಯ ತಂಡ ಇರಲಿವೆ ಎಂದರು. ಅರ್ಧ ಗಂಟೆ ವೈದ್ಯರ ವೀಕ್ಷಣೆಯಲ್ಲಿದ್ದ ನಂತರ ಜಿಲ್ಲಾಧಿಕಾರಿಗಳು ಲಸಿಕಾ ಕೇಂದ್ರದಿಂದ ತೆರಳಿದರು.
8510 ಕಾರ್ಯಕರ್ತರಿಗೆ ಲಸಿಕೆ ನೀಡುವ ಗುರಿ: ಜಿಲ್ಲೆಯಾದ್ಯಂತ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ ಹಾಗೂ ಇ.ಎಸ್.ಐ.ಸಿ.ಆಸ್ಪತ್ರೆ ಒಳಗೊಂಡಂತೆ 23 ಲಸಿಕೆ ಕೇಂದ್ರಗಳಲ್ಲಿ ಮೂರು ದಿನಗಳ ಕಾಲ 21 ಸೆಷನ್ಸ್‍ಗಳಲ್ಲಿ 8510 ಸಿಬ್ಬಂದಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಸದ್ಯದ ಅಂದಾಜಿನ ಪ್ರಕಾರ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ 3194, ಪೆÇಲೀಸ್ ಇಲಾಖೆಯ 3772 ಹಾಗೂ ನಗರ ಸ್ಥಳೀಯ ಸಂಸ್ಥೆಗಳ 1544 ಅಧಿಕಾರಿ-ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುತ್ತಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ, ಜಿಮ್ಸ್ ಪ್ರಭಾರಿ ಡೀನ್ ಡಾ. ಚಂದ್ರಶೇಖರ್ ಕರ್ಪೂರ್, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್, ಪಿ & ಎಸ್.ಎಂ. ಮುಖ್ಯಸ್ಥ ಡಾ.ಅಜಯಕುಮಾರ, ಡಾ.ಜಯಮ್ಮ, ನೋಡಲ್ ಅಧಿಕಾರಿ ಡಾ.ಗುರುರಾಜ, ಜಿಲ್ಲಾ ಆಸ್ಪತ್ರೆಯ ಶಸ್ತ್ರಜ್ಞರು ಹಾಗೂ ಅಧೀಕ್ಷಕ ಡಾ.ಅಂಬಾರಾಯ ಎಸ್. ರುದ್ರವಾಡಿ, ಜಿಲ್ಲಾ ಆರ್.ಸಿ.ಹೆಚ್ ಓ. ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಸೇರಿದಂತೆ ನರ್ಸಿಂಗ್ ಸಿಬ್ಬಂದಿಗಳು ಇದ್ದರು.